ಓದುಗಾರಿಕೆ: ಲಿಖಿತ ಅಥವಾ ಮುದ್ರಿತ ಸಂಕೇತಗಳ ಮೂಲಕ ವ್ಯಕ್ತವಾಗುವ ಕೃತಿಕಾರನ ಅಭಿಪ್ರಾಯವನ್ನು ಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಮನೋವ್ಯಾಪಾರ. ಮಾನವನ ಅನುಭವ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಇರುವ ಬಹುಮುಖ್ಯ ಸಾಧನೆ. ಪ್ರತಿ ವ್ಯಕ್ತಿಯೂ ಶಿಕ್ಷಣದಿಂದ ತನ್ನ ವ್ಯಕ್ತಿತ್ವವನ್ನು ಪರಿಪುರ್ಣವಾಗಿ ವಿಕಸಿಸುವಂತೆ ಮಾಡಿಕೊಳ್ಳುವುದು ಅಗತ್ಯವೆಂಬ ಅಭಿಪ್ರಾಯವಿರುವ ಈ ಕಾಲದಲ್ಲಿ ಓದುವುದಕ್ಕೆ ವ್ಯಾಸಂಗ ಕ್ರಮದಲ್ಲಿ ಪ್ರಧಾನ ಸ್ಥಾನವನ್ನು ಕೊಟ್ಟಿದೆ.

ಶಾಲಾ ಜೀವನದಲ್ಲಿ ವಿದ್ಯಾರ್ಥಿ ಈ ಕಲೆಯನ್ನು ಬೆಳೆಸಿಕೊಳ್ಳಲು ಸಾಕಷ್ಟು ಅವಕಾಶವಿರಬೇಕು. ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಪಠ್ಯಪುಸ್ತಕಗಳ ಮೂಲಕ, ಆಟಪಾಠಗಳ ಮೂಲಕ, ವಿಚಾರಗೋಷ್ಠಿಗಳ ಮೂಲಕ, ಅರಿಯಲು ಅನುಕೂಲವಿರಬೇಕು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯಗತ್ಯವಾಗಿ ಬೇಕಾದುದು ಓದಿನ ನೈಪುಣ್ಯ. ಹೀಗಾಗಿ ಶಾಲೆಯಲ್ಲಿ ಕಲಿಯುವ ಚರಿತ್ರೆ, ಭೂಗೋಳ, ಸಾಹಿತ್ಯ, ವಿಜ್ಞಾನ, ಲೆಕ್ಕ ಮುಂತಾದ ವಿಷಯಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬೇಕಾದರೆ, ಒಳ್ಳೆಯ ಓದುಗಾರಿಕೆಯನ್ನು ಸಾಧಿಸಬೇಕು. ಅಂದರೆ ಓದುಗಾರಿಕೆಯ ಅನೇಕ ಉತ್ತಮ ಲಕ್ಷಣಗಳನ್ನು ಪರಿಚಯ ಮಾಡಿಕೊಟ್ಟು ಓದುವುದರಲ್ಲಿ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಬೇಕು; ಅದಕ್ಕಾಗಿ ವ್ಯಾಸಂಗ ಪದ್ಧತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸುವ ಕ್ರಮವನ್ನು ರೂಢಿಸಿಕೊಳ್ಳುವುದು ಅಗತ್ಯ.
ಓದುಗಾರಿಕೆ ವ್ಯಕ್ತಿಯಲ್ಲಿ ಶಿಕ್ಷಣದಿಂದ ಮೂಡಬೇಕಾದ ಉಪಯುಕ್ತ ಕೌಶಲ್ಯವಾದರೂ ಅದನ್ನು ಬೋಧಿಸುವುದು ಸುಲಭದ ಕೆಲಸವೇನಲ್ಲ. ಏಕೆಂದರೆ ಅದು ಅನೇಕ ಸೂಕ್ಷ್ಮವೂ ಕ್ಲಿಷ್ಟಕರವೂ ಆದ ಅಂಶಗಳನ್ನು ಒಳಗೊಂಡಿದೆ. ವಿದ್ಯಾರ್ಥಿಯಲ್ಲಿ ಕಂಡುಬರುವ ಓದುಗಾರಿಕೆಯ ದೋಷಗಳನ್ನೂ ನ್ಯೂನತೆಗಳನ್ನು ನಿವಾರಿಸುವಂತೆ ಅದನ್ನು ಬೋಧಿಸುವುದು ಶಾಸ್ತ್ರೀಯವೂ ಕೌಶಲ್ಯಪೂರ್ಣವೂ ಆದ ಕಾರ್ಯ, ಹಾಗೂ ಸಾಮೂಹಿಕವಾಗಿ ತೃಪ್ತಿಕರವಾದ ರೀತಿಯಲ್ಲಿ ಬೋಧಿಸುವುದು ಇನ್ನೂ ಕಷ್ಟದ ಕೆಲಸ. ಆದರೆ, ಅನೇಕ ಸಂಶೋಧನೆಗಳಿಂದ, ಹಲವಾರು ಬೋಧನ ತಂತ್ರಗಳು ಬೆಳಕಿಗೆ ಬಂದು ಓದುಗಾರಿಕೆಯನ್ನು ಪರಿಣಾಮಕಾರಿಯಾಗಿ ಬೋಧಿಸಬಲ್ಲ ವಿಧಾನಗಳು ಈಗ ರೂಪುಗೊಂಡಿವೆ. ಹಾಗೂ ಓದುಗಾರಿಕೆಯಲ್ಲಿ ಕಂಡುಬರುವ ಲೋಪದೋಷಗಳಿಗೆ ಕಾರಣವೆನಿಸುವ ವಿಶಿಷ್ಟ ದೌರ್ಬಲ್ಯಗಳನ್ನು ನಿವಾರಿಸುವ ವಿಧಾನಗಳೂ ಬಳಕೆಗೆ ಬರುತ್ತಿವೆ.	(ಎ.ಎಂ.ಎಸ್.) 

 ಓದುಗಾರಿಕೆಯ ಬೋಧನಕ್ರಮ 
ಪ್ರತಿ ಅಕ್ಷರಕ್ಕೂ ಪ್ರತ್ಯೇಕವೂ ವಿಶಿಷ್ಟವೂ ಆದ ಧ್ವನಿ ಕನ್ನಡದಂಥ ಕೆಲವು ಭಾಷೆಗಳಲ್ಲಿ ಹಿಂದಿನಿಂದಲೂ ಇದೆ; ಮತ್ತೆ ಕೆಲವು ಭಾಷೆಗಳು ತಮ್ಮ ಈ ಕೊರತೆಯನ್ನು ತುಂಬಿಕೊಳ್ಳಲು ಉಚ್ಚಾರ ಚಿಹ್ನೆಗಳನ್ನು ಬಳಸಿಕೊಳ್ಳುವುದಲ್ಲದೆ ಹೊಸ ಕೆಲವು ಅಕ್ಷರಗಳನ್ನು ಸೇರಿಸಿಕೊಳ್ಳುವುದರ ಮೂಲಕ ತಮ್ಮ ವರ್ಣಮಾಲೆಯನ್ನೇ ಮಾರ್ಪಡಿಸಿಕೊಳ್ಳುತ್ತಿವೆ. ಇದರಿಂದ ಓದುಗಾರಿಕೆಯಲ್ಲಿ ನಿಷ್ಕೃಷ್ಟತೆ ಮೂಡುವುದರ ಜೊತೆಗೆ ಅದನ್ನು ಕಲಿಯುವುದೂ ಬೋಧಿಸುವುದೂ ಸರಳವಾಗುತ್ತದೆ. ಅಕ್ಷರ ಧ್ವನಿಯಿರುವ ಭಾಷೆಗಳಲ್ಲಿ ಓದುಗಾರಿಕೆಯನ್ನು ಅಕ್ಷರಾಭ್ಯಾಸದಿಂದ ಆರಂಭಿಸುವುದು ವಾಡಿಕೆ. ಭಾರತದಲ್ಲಿ ಪುರಾತನ ಕಾಲದಿಂದಲೂ ಈ ಕ್ರಮ ಬಳಕೆಯಲ್ಲಿದೆ. ಮಕ್ಕಳಿಗೆ ವರ್ಣಮಾಲೆಯ ಅಕ್ಷರಗಳನ್ನೂ ಅವುಗಳ ಹೆಸರುಗಳನ್ನೂ ಕಲಿಸಿ ಅನಂತರ ಕಾಗುಣಿತವನ್ನು ಹೇಳಿಕೊಟ್ಟು ಅಕ್ಷರಗಳನ್ನು ಜೋಡಿಸಿ ಅರ್ಥಪುರ್ಣ ಪದಗಳನ್ನು ಓದುವುದನ್ನು ಕಲಿಸುತ್ತಿದ್ದರು. ಅಕ್ಷರಗಳನ್ನು ಗುರುತಿಸಿ ಪದಗಳ ಶಬ್ದೋಚ್ಚಾರಣೆಯ ಮೇಲೆ ಒಡೆತನ ಸಿದ್ಧಿಸಿದಂತೆ ಕ್ರಮವಾದ ಓದುಗಾರಿಕೆಯನ್ನು ಆರಂಭಿಸುವುದೇ ಅಕ್ಷರ ಮೂಲ ಬೋಧನಕ್ರಮ (ಎ.ಬಿ.ಸಿ. ಬೋಧನಕ್ರಮ). ಈ ಕ್ರಮದಲ್ಲಿ ಓದುಗಾರಿಕೆಯನ್ನು ಬೋಧಿಸುವುದು (ಧ್ವನ್ಯಾತ್ಮಕ) ಅಕ್ಷರವುಳ್ಳ ಭಾಷೆಗಳಲ್ಲೇನೋ ಸರಳವಾಗಿ ತೋರುತ್ತದೆ; ಆದರೆ ಮಿಕ್ಕ ಭಾಷೆಗಳಲ್ಲಿ ಇದು ತೊಡಕಿನದೇ ಆಗುತ್ತದೆ. ಆದರೆ ಅಕ್ಷರಮೂಲ ಬೋಧನಕ್ರಮ ಮನೋವಿಜ್ಷಾನ ಸಮ್ಮತವಲ್ಲವೆಂಬ ವಿಷಯ ಪ್ರಚಾರವಾದಂತೆ ನೂತನ ಬೋಧನ ವಿಧಾನಗಳು ಬಳಕೆಗೆ ಬರುತ್ತಿವೆ. ಒಂದೊಂದು ಅಕ್ಷರದ ಧ್ವನಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಬದಲು ಮಕ್ಕಳು ಇಡೀ ಪದದ ಧ್ವನಿಯನ್ನೇ ಗುರುತಿಸುವರೆಂದೂ ಆದ್ದರಿಂದ ಧ್ವನಿಕವಲ್ಲದ ಭಾಷೆಗಳಾದರೆ ಪ್ರತಿ ಅಕ್ಷರವನ್ನೂ ಪ್ರತ್ಯೇಕವಾಗಿ ಓದುವುದನ್ನು ಕಲಿಸುವ ಬದಲು ಅವು ಪದದ ಸಮಗ್ರ ಧ್ವನಿನಿರೂಪಣೆಗೆ ಸಲ್ಲಿಸುವ ಪ್ರತ್ಯೇಕ ಧ್ವನಿಕೊಡುಗೆಯ ಸಂಯೋಜಿತ ರೂಪದಲ್ಲಿ ಇಡೀ ಪದದ ಧ್ವನಿಯನ್ನು ಗುರುತಿಸಿ ಓದುವುದನ್ನು ಕಲಿಸಬೇಕೆಂಬ ಪ್ರಚಾರ ನಡೆಯಿತು. ಅದಕ್ಕಾಗಿ ಒಂದೊಂದು ಪದದಲ್ಲೂ ಇರತಕ್ಕ ಅಕ್ಷರಗಳ ಧ್ವನಿಯನ್ನು ಗುರುತಿಸುವಾಗ ವಿಧವಿಧವಾದ ಸೂಚನೆಗಳನ್ನು ಮುದ್ರಣ ಪ್ರತಿಗಳಲ್ಲಿ ಕೊಡುವುದೂ ಆರಂಭವಾಯಿತು. ಒಂದೇ ಅಕ್ಷರ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರತಿನಿಧಿಸುವ ಬೇರೆ ಬೇರೆ ಧ್ವನಿಗಳನ್ನು ಗುರುತಿಸುವುದನ್ನು ಕಲಿಸುವುದು ಈ ಕಾರ್ಯದ ಉದ್ದೇಶವಾಗಿತ್ತು. ಧ್ವನಿಯ ಸಂಯೋಜನೆಗೆ ಪ್ರಾಧಾನ್ಯವುಳ್ಳ ಈ ಪದಮೂಲ ಬೋಧನಕ್ರಮ ಕಳೆದ ಶತಮಾನದ ಮಧ್ಯದವರೆಗೂ ಪ್ರಚಾರದಲ್ಲಿದ್ದರೂ ಅಕ್ಷರಮೂಲ ಕ್ರಮವನ್ನೂ ಅದರಲ್ಲೆ ಸೇರಿಸಿಕೊಳ್ಳುವುದು ಅಗತ್ಯವೆಂಬ ಅನುಭವ ಬೆಳೆಯಿತು. ಇದನ್ನು ಸಂಯೋಜನ (ಸಿಂತೆಟಿಕ್) ಕ್ರಮ ಎನ್ನುವುದುಂಟು.
 
ಅನಂತರ ನಡೆದ ಸಂಶೋಧನೆಗಳು ಮಕ್ಕಳು ಅಕ್ಷರವನ್ನು ಗುರುತಿಸಿ ಓದುವಷ್ಟೇ ಜಾಗ್ರತೆ ಪದಗಳನ್ನೂ ಗುರುತಿಸಿ ಓದುವರೆಂಬುದನ್ನು ತೋರಿಸಿಕೊಟ್ಟುವು; ಆದ್ದರಿಂದ ಪದಗಳನ್ನು ದೃಷ್ಟಿಯಿಂದ ಗುರುತಿಸಿ ಓದುವುದನ್ನು ಅಕ್ಷರ ಧ್ವನಿಗಳನ್ನು ಗುರುತಿಸುವುದನ್ನು ಕಲಿಯುವ ಮುನ್ನವೆ, ಕಲಿಸುವುದು ಅಗತ್ಯವೆಂದು ಸಲಹೆ ಬಂತು. ಅನೇಕ ಶಾಲೆಗಳು ಈ ಕ್ರಮವನ್ನು ವಿಶ್ಲೇಷಣಕ್ರಮ ಎಂಬ ಹೆಸರಿನಿಂದ ಪ್ರಚಾರಕ್ಕೆ ತಂದುವು. ಇದನ್ನು ದೃಷ್ಟಿಪಠನಕ್ರಮ ಎಂದೂ ಕರೆಯುವರು. ಅನಂತರ ಇಡೀ ವಾಕ್ಯವನ್ನೇ ಗುರುತಿಸುವುದನ್ನು ಕಲಿಸುವ ಬೋಧನಕ್ರಮವೂ ಆರಂಭವಾಯಿತು. ಆಮೇಲೆ ಅದರ ಒಂದೊಂದು ಪದವನ್ನೂ ಗುರುತಿಸುವುದನ್ನು ಕಲಿಸುತ್ತಿದ್ದರು. ಈ ಎರಡು ಕ್ರಮಗಳಲ್ಲೂ ಸೌಲಭ್ಯಗಳಂತೆ ತೊಡಕುಗಳೂ ಇವೆ. ಆದ್ದರಿಂದ ಈಚೆಗೆ ಕಾರ್ಯನಿರತ ಅಧ್ಯಾಪಕರು ಇವೆರಡರ ಉತ್ತಮಾಂಶಗಳನ್ನೂ ಬಳಸಿಕೊಂಡು ಒಂದು ಸಮ್ಮಿಶ್ರ ವಿಧಾನವನ್ನು ಅನುಸರಿಸುತ್ತಿರುವರು.

ಓದುಗಾರಿಕೆಯ ಕಲಿವಿನಲ್ಲಿ ನೇತ್ರಚಲನೆಯ ಪಾತ್ರ: ಓದುಗಾರಿಕೆಯಲ್ಲಿ ನೇತ್ರ ಚಲನೆಯದೊಂದು ಬಹುಮುಖ್ಯ ಪಾತ್ರ; ಕಳೆದ ಶತಮಾನದ ಕೊನೆ ಕೊನೆಯವರೆಗೂ ಕಣ್ಣುಗಳು ಎಡದಿಂದ ಬಲಕ್ಕೆ ಪಂಕ್ತಿಯ ಮೇಲೆ ಒಂದೇ ಸಮನೆ ಚಲಿಸುವುವು ಎಂದು ನಂಬಲಾಗಿತ್ತು. ಈಚಿನ ಸಂಶೋಧನೆಗಳು ಕಣ್ಣಿನ ನೋಟ ಎಡದಿಂದ ಬಲಕ್ಕೆ ನಿಂತು ನಿಂತು ಸಾಗುವುದೆಂದು ತೋರಿಸಿವೆ. ಈ ಒಂದೊಂದು ನಿಲುವೂ ಹಿಂದಿನ ಪದಗಳ ಅರ್ಥವನ್ನು ಕ್ರೋಡೀಕರಿಸಿಕೊಳ್ಳುವುದಕ್ಕೂ ಮುಂದಿನ ಪದಗಳ ಅರ್ಥವನ್ನು ಅದರೊಡನೆ ಸಮೀಕರಿಸಿ ಹೊಂದಿಸಿಕೊಳ್ಳುವುದಕ್ಕೂ ನೆರವಾಗುತ್ತದೆ. ಪಂಕ್ತಿ ಮುಗಿದೊಡನೆ ಕಣ್ಣು ವೇಗವಾಗಿ ಹಿಂಚಲನೆ ನಡೆಸುತ್ತದೆ. ಕಣ್ಣಿನ ಚಲನೆಯನ್ನೂ ಉಚ್ಚರಿಸುವ ಧ್ವನಿಯನ್ನೂ ಏಕಕಾಲದಲ್ಲಿ ಚಿತ್ರಿಸಿಕೊಂಡು ಪರಿಶೀಲಿಸುವ ‘ದೃಶ್ಯ-ಶಬ್ದ’ ಚಿತ್ರಣದ ತಂತ್ರ ಆರಂಭವಾದ ಮೇಲೆ ನಡೆಸಿದ ಪ್ರಯೋಗಗಳಿಂದ ಧ್ವನಿಗಿಂತ ಮುಂದೆ ಕಣ್ಣನೋಟ ಸಾಗುವುದೆಂಬುದು ವ್ಯಕ್ತಪಟ್ಟಿದೆ. ಮೌನವಾಚನವಾದರೆ ಕಣ್ಣಿನ ನೋಟದ ಚಲನೆ ಭಿನ್ನ ರೀತಿಯದಾಗುವುದೆಂಬುದೂ ಗೊತ್ತಾಗಿದೆ. ಅಂತೆಯೇ ಗಟ್ಟಿಯಾಗಿ ಓದುವ ಮತ್ತು ಮೌನವಾಗಿ ಓದುವ ಕ್ರಿಯೆಗಳಿಗಿರುವ ವ್ಯತ್ಯಾಸವೂ ಗೋಚರವಾಗಿದೆ. ಅದರ ಫಲವಾಗಿ ಅದುತನಕ ಕಡೆಗಣಿಸಿದ್ದ ಮೌನವಾಚನ ತಂತ್ರದ ಕಡೆ ಹೆಚ್ಚಿನ ಗಮನ ಹರಿಯಿತು; ಹಾಗೆಯೆ, ಕೇವಲ ಧ್ವನಿಯನ್ನು ಉಚ್ಚರಿಸಿ ಅಕ್ಷರಶಃ ಓದುವುದೊಂದೇ ಓದುಗಾರಿಕೆಯ ಪುರ್ಣ ಉದ್ದೇಶವಲ್ಲವೆಂಬುದೂ ಓದಿದ ಅಂಶದ ಭಾವನೆಗಳನ್ನು ಅರ್ಥಮಾಡಿಕೊಂಡು ಸೂಕ್ತಮನೋಭಾವ ತಾಳುವುದೂ ಅಗತ್ಯ ಎಂಬ ಅಂಶವೂ ಸ್ಪಷ್ಟಪಟ್ಟಿರುವುದು.

 ಓದುಗಾರಿಕೆಯ ಕಲಿವಿನ ಹಂತಗಳು 
ಇದರಲ್ಲಿ ನಾಲ್ಕು ಮುಖ್ಯ ಅಂತಸ್ತುಗಳನ್ನು ಗುರುತಿಸಬಹುದು. 1. ಸಿದ್ಧತೆಯ ಹಂತ: ಜನನದಿಂದಲೇ ಈ ಸಿದ್ಧತೆ ಆರಂಭವಾಗುತ್ತದೆ; ಅನುಭವಾರ್ಜನೆ, ಭಾಷೆಯ ಬೆಳೆವಣಿಗೆ, ಇತರರ ಮಾತನ್ನೂ ಓದನ್ನೂ ಕೇಳುವುದು, ಇತರರೊಡನೆ ಸಹಕರಿಸಿ ಕೆಲಸ ಮಾಡುವುದು, ಹೇಳಿದಂತೆ ಮಾಡುವುದು-ಇವೆಲ್ಲ ಓದುಗಾರಿಕೆಗೆ ಸಿದ್ಧತಾರೂಪದ ತರಬೇತು. ಜೊತೆಗೆ ಮನೆಯಲ್ಲಿ ಹಿರಿಯರ ಜೀವನದಲ್ಲಿ ಓದುಗಾರಿಕೆ ವಹಿಸುವ ಪಾತ್ರದ ಪ್ರಭಾವವೂ ಅದರ ಮೇಲೆ ಬಿದ್ದು, ಆ ಮುಖವಾಗಿ ಅವರ ಆಸಕ್ತಿಯೂ ತದಂಗವಾಗಿ ಅವರಲ್ಲಿ ಆ ಕಾರ್ಯಕ್ಕೆ ಸಿದ್ಧತೆಯೂ ಮೂಡುತ್ತವೆ; ಶಿಶುವಿಹಾರದ ಕಾರ್ಯಕ್ರಮಗಳು ಮಕ್ಕಳಲ್ಲಿ ಮಾತುಗಾರಿಕೆ ಮತ್ತು ಅನುಭವಗಳನ್ನು ರೂಢಿಸಿ ಆ ಸಿದ್ಧತೆಯನ್ನು ಬೆಳೆಸುತ್ತವೆ. ಸು. ಆರು ವರ್ಷದ ಮಗುವಿನ ಸರಾಸರಿ ದೈಹಿಕ, ಭಾವಾತ್ಮಕ, ಸಾಮಾಜಿಕ ಮತ್ತು ಭಾಷಾರೂಪದ ಸಿದ್ಧತೆ ಓದುಗಾರಿಕೆಯ ಆರಂಭಕ್ಕೆ ಸೂಕ್ತಕಾಲವೆಂದು ಪರಿಗಣಿತವಾಗಿದೆ. 2. ಓದುವ ಅಂತಸ್ತು; ಸುಲಭ ಪದಗಳನ್ನು ಗುರುತಿಸುವುದೇ ಎರಡನೆಯ ಹಂತ. ಈ ಹಂತದ ಕೊನೆಯಲ್ಲಿ 300 ಪದಗಳನ್ನು ಓದುವವರು. ಕಠಿಣವೂ ನೂತನವೂ ಆದ ಪದಗಳನ್ನು ಓದುವುದು ಕಷ್ಟವಾದರೂ ಕ್ರಮಕ್ರಮವಾಗಿ ಆ ಮುಖವಾಗಿ ಅಭಿವೃದ್ಧಿ ಸಾಧಿಸಬಲ್ಲರು. ಪ್ರಾಥಮಿಕ ಅಂತಸ್ತಿನ ಕೊನೆಗೆ ಸುಲಭ ಪಾಠಗಳನ್ನು ಸ್ವತಂತ್ರವಾಗಿ ಓದಬಲ್ಲರು. 3. ಶಬ್ದಾವಳಿಯ ಬೆಳೆವಣಿಗೆಯ ಹಂತ; ಕಠಿಣಪದಗಳನ್ನು ಓದುವ ಕೌಶಲ್ಯ ಬೆಳೆದಂತೆ ಶಬ್ದಾವಳಿ ಹೆಚ್ಚಿ ಅರ್ಥಜ್ಞಾನ ವಿಸ್ತರಿಸುತ್ತದೆ. ಮುಂದಿನ ಓದುಗಾರಿಕೆಗೆ ಇವೆರಡೂ ಸಹಾಯಮಾಡುತ್ತವೆ. ಜೊತೆಗೆ ವಿಜ್ಞಾನ, ಪ್ರವಾಸ, ಸಮಾಜಪಾಠ ಇತ್ಯಾದಿ ವಿಷಯಗಳ ಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳುವ ಶಕ್ತಿಯೂ ಮೂಡುತ್ತದೆ. ವೈಯಕ್ತಿಕ ಆಸಕ್ತಿಗಳನ್ನು ಈಡೇರಿಸಿಕೊಂಡು ಆನಂದಪಡಲು ಓದನ್ನು ಬಳಸುವುದು ಪ್ರೌಢಶಾಲೆಗಳಲ್ಲಿ ಆರಂಭವಾಗುತ್ತದೆ. 4.ಅಭಿರುಚಿಯನ್ನು ಬೆಳೆಸುವ ಓದುಗಾರಿಕೆ ಹಿಂದೆ ಸಾಧಿಸಿರುವ ಓದುಗಾರಿಕೆಯ ಕೌಶಲ್ಯ ಈಗ ಹೆಚ್ಚು ಪರಿಣಾಮಕಾರಿಯೂ ಪ್ರಭಾವಕಾರಿಯೂ ಆಗುತ್ತದೆ. ಪದಗಳ ಅರ್ಥವ್ಯಾಪ್ತಿ ವಿಸ್ತರಿಸುವುದಲ್ಲದೆ ಸ್ಪಷ್ಟತೆಯನ್ನೂ ಸಾಧಿಸುತ್ತದೆ. ಓದಿದ ವಿಷಯದಲ್ಲಿ ಜ್ಞಾನವನ್ನು ವಿವೇಚಿಸಿ ತನ್ನ ಜೀವನದಲ್ಲಿ ಬಳಸಿಕೊಳ್ಳುವ ಶಕ್ತಿಯೂ ಮೂಡುತ್ತದೆ. ಆಗ ಓದುಗಾರಿಕೆಯನ್ನು ವ್ಯಕ್ತಿಯ ಆಸಕ್ತಿಯ ವಿಶಿಷ್ಟ ಕ್ಷೇತ್ರದಲ್ಲಿ ಬಳಸುವುದು ಆರಂಭವಾಗುತ್ತದೆ.

 ಓದುಗಾರಿಕೆಯ ಬೋಧನೆಗೆ ಸಿದ್ಧತೆ 
ಕೆಲವು ಕುಟುಂಬಗಳಿಂದ ಶಾಲೆಗೆ ಬರುವ ಮಕ್ಕಳು ಓದುಗಾರಿಕೆಗೆ ಆಗಲೆ ಸಿದ್ಧತೆ ಪಡೆದಿರಬಹುದಾದರೂ ಮಿಕ್ಕ ಬಹುಮಂದಿ ಮಕ್ಕಳಿಗೆ ಅದು ಶಾಲೆಯಲ್ಲೇ ಆಗಬೇಕು. ಈಚಿನ ಕೆಲವು ಸಂಶೋಧನೆಗಳು ಸೂಚಿಸಿರುವಂತೆ, ಓದುಗಾರಿಕೆಗೆ ಪುರ್ವಭಾವಿಯೆನ್ನಬಹುದಾದ ಕೆಲವು ಅಂಶಗಳನ್ನು ಅಧ್ಯಾಪಕರು ಗಮನದಲ್ಲಿರಿಸಿಕೊಂಡು ಕೆಲವು ಪುರ್ವಭಾವಿ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡರೆ ಮಕ್ಕಳು ಮುಂದೆ ಓದುಗಾರಿಕೆಯನ್ನು ಸುಲಭವಾಗಿಯೂ ವೇಗವಾಗಿಯೂ ಕಲಿಯಬಲ್ಲರೆಂದು ಸ್ಪಷ್ಟಪಟ್ಟಿದೆ. ಆದ್ದರಿಂದ ಓದುಗಾರಿಕೆಯನ್ನು ಕಲಿಸುವ ಮುನ್ನ ಗಮನಿಸಬೇಕಾದ ಅಂಶಗಳನ್ನು ಇಲ್ಲಿ ಪರಿಶೀಲಿಸಬಹುದು.

ದೃಷ್ಟಿ ಮತ್ತು ಕೇಳುವಿಕೆ ಇವೆರಡೂ ಮಕ್ಕಳಲ್ಲಿ ತಮ್ಮ ಪಟುತ್ವವನ್ನು ಹೆಚ್ಚಿಸಿಕೊಳ್ಳುವಂತೆ ಸೂಕ್ತ ಚಟುವಟಿಕೆಗಳನ್ನು ಒದಗಿಸಬೇಕು. ಕಣ್ಣು ಮತ್ತು ಕಿವಿಗಳಲ್ಲೇನಾದರೂ ದೋಷವಿದ್ದರೆ ಅಗತ್ಯ ಚಿಕಿತ್ಸೆಯನ್ನೊದಗಿಸುವಂತೆ ಪೋಷಕರಿಗೆ ಸೂಚಿಸಬೇಕು; ಓದುಗಾರಿಕೆಯಲ್ಲಿ ಚಲನಕೌಶಲದ ಸಮಾಯೋಜನೆ ಪ್ರಮುಖ ಪಾತ್ರವಹಿಸುತ್ತದೆ. ಕೈಯನ್ನೂ ಕಣ್ಣನ್ನೂ ಎಡದಿಂದ ಬಲಕ್ಕೆ ಜೊತೆಗೂಡಿಸಿ ಓಡಿಸುವುದು ಅಭ್ಯಾಸವಾಗಬೇಕು. ಚಿತ್ರಗಳಿಗೆ ಬಣ್ಣ ತುಂಬಿಸುವುದು. ಚಿತ್ರಗಳ ಭಾಗಗಳನ್ನು ಕತ್ತರಿಸಿ ಬೇರ್ಪಡಿಸುವುದು, ಚಿತ್ರ ಬರೆದು ಬಣ್ಣ ತುಂಬುವುದು, ಮಣ್ಣಿನಿಂದ, ಮಣಿಗಳಿಂದ, ಕಡ್ಡಿಗಳಿಂದ ಚಿತ್ರ ರಚಿಸುವುದು-ಇಂಥ ಚಟುವಟಿಕೆಗಳಿಂದ ಕಣ್ಣು ಮತ್ತು ಕೈಗಳಿಗೆ ಆ ಬಗೆಯ ಸಿದ್ಧತೆ ಸಿದ್ಧಿಸುತ್ತದೆ. ಅಧ್ಯಾಪಕರು ಪ್ರಾಥಮಿಕ ಮೊದಲನೆಯ ತರಗತಿಯ ಆರಂಭದಲ್ಲಿ ಅಂಥ ಚಟುವಟಿಕೆಗಳನ್ನು ಒದಗಿಸಬೇಕು. 

ಕೆಲವು ದೃಶ್ಯ ಮತ್ತು ಶ್ರವ್ಯಾನುಭವಗಳೂ ಸಿದ್ಧತೆಯ ಕಾಲದಲ್ಲಿ ದೊರಕಬೇಕು. ಸಮಾನ ಆಕೃತಿಯ ಗೆರೆ, ರೂಪ ಮುಂತಾದವನ್ನು ಗುರುತಿಸುವ ಮತ್ತು ಭಿನ್ನ ಆಕೃತಿಯವನ್ನು ಪ್ರತ್ಯೇಕಿಸುವ ಚಟುವಟಿಕೆಗಳನ್ನೂ ಒದಗಿಸಬೇಕು. ಧ್ವನಿಭೇದಗಳನ್ನು ಗುರುತಿಸಲಾರದ ಮಕ್ಕಳು ಓದುಗಾರಿಕೆಯನ್ನು ಕಲಿಯುವುದರಲ್ಲಿ ಹಿಂದುಳಿಯುವರು. ಆದ್ದರಿಂದ ಪದಗಳಲ್ಲಿ ಪಾತ್ರವಹಿಸುವ ಅಕ್ಷರಗಳ ಧ್ವನಿಗಳನ್ನು ಆಸಕ್ತಿಯಿಂದ ಮಕ್ಕಳು ಕೇಳುವಂತೆ ಮಾಡಿ ಆ ಮುಖವಾದ ಸಿದ್ಧತೆಯನ್ನೂ ರೂಢಿಸಿಕೊಳ್ಳಬೇಕು.

ಮಾತೃಭಾಷೆಯಲ್ಲಿ ಚೆನ್ನಾಗಿ ಮಾತಾಡುವುದೂ ಸರಿಯಾಗಿ ಪದಪ್ರಯೋಗ ಮಾಡುವುದೂ ಓದುಗಾರಿಕೆಯ ಕಲಿವಿಗೆ ತುಂಬ ನೆರವಾಗುತ್ತದೆ. ಆದ್ದರಿಂದ ಅಧ್ಯಾಪಕರು ಮಕ್ಕಳಿಗೆ ಕಥೆ ಹೇಳಿಸುವುದು, ಸಂವಾದ ನಡೆಸುವುದು, ತಮ್ಮ ಅನುಭವಗಳನ್ನು ಬಣ್ಣಿಸುವಂತೆ ಕೇಳುವುದು - ಇತ್ಯಾದಿ ಪುರ್ವಭಾವಿ ಚಟುವಟಿಕೆಗಳನ್ನು ವ್ಯವಸ್ಥೆಗೊಳಿಸಬಹುದು.

ಇತರ ಮಕ್ಕಳೊಡನೆ ಸಹಕರಿಸಿ ಕೆಲಸಮಾಡುವುದು, ಹಿಡಿದ ಕಾರ್ಯವನ್ನು ಗಮನ ಕೊಟ್ಟು ಮಾಡುವುದು, ತಮ್ಮ ನಿತ್ಯಜೀವನದ ಆಸಕ್ತಿಗಳಿಗೆ ಓದುಗಾರಿಕೆ ಮುಖ್ಯ ಎಂದು ಅರಿಯುವುದು-ಇವು ಓದುಗಾರಿಕೆಗೆ ಮುನ್ನ ನಡೆಯಬೇಕಾದ ಇತರ ಕೆಲವು ಸಿದ್ಧತೆಗಳು.

 ಬೋಧನಕ್ರಮ 
ಓದುಗಾರಿಕೆಗೆ ಅಗತ್ಯವೆನಿಸುವ ಪುರ್ವಸಿದ್ಧತೆ ನಡೆದಿದ್ದರೆ ಮಕ್ಕಳು ತಮ್ಮ ಅನುಭವಕ್ಕೆ ಬಂದಿರುವ ಪದಗಳನ್ನು ಚಿತ್ರ, ಕ್ರಿಯೆ, ವಿವರಣೆ ಇತ್ಯಾದಿ ನಿದರ್ಶನಗಳ ಜೊತೆಯಲ್ಲಾದರೆ ಸುಲಭವಾಗಿ ಗುರುತಿಸಬಲ್ಲರು; ಬಾಲಬೋಧೆಯಲ್ಲಿ ಚಿತ್ರವನ್ನು ಮೇಲೆ ಕೊಟ್ಟು ಕೆಳಗೆ ಪದಗಳನ್ನು ಮುದ್ರಿಸಿರುವಾಗ ಮಕ್ಕಳು ಪದಗಳನ್ನು ಗುರುತಿಸುವರು; ಹೊಸ ಹೊಸ ಪಾಠಗಳಲ್ಲಿ ಪದಗಳನ್ನು ಈ ರೀತಿ ಗುರುತಿಸಿದಂತೆ ಆಗಲೆ ಬಂದಿರುವ ಪದಗಳ ಪುನರಾವರ್ತನೆಯಾಗಿ ಅವನ್ನು ಗುರುತಿಸುವುದು ಸುಲಭವಾಗುತ್ತದೆ. ಬಾಲಬೋಧೆ ಮುಗಿಯುವ ವೇಳೆಗೆ ಅನೇಕ ಪದಗಳನ್ನು ಗುರುತಿಸುವುದು ಸಾಧ್ಯವಾಗುವುದು. ಪ್ರತಿ ಅಕ್ಷರಕ್ಕೂ ಸನ್ನಿವೇಶಕ್ಕೆ ತಕ್ಕಂತೆ ಧ್ವನಿ ವ್ಯತ್ಯಾಸವಾಗುವ ಇಂಗ್ಲಿಷಿನಂಥ ಭಾಷೆಯಲ್ಲಿ ಓದುಗಾರಿಕೆಯ ಬೋಧನೆಗೆ ಇದು ನಿಜವಾಗಿಯೂ ಅನುಕೂಲ. ಆದರೆ ಕನ್ನಡದಂಥ ಭಾಷೆಯಲ್ಲಿ ಪ್ರತಿ ಅಕ್ಷರಕ್ಕೂ ನಿರ್ದಿಷ್ಟ ಧ್ವನಿಯುಂಟು. ವರ್ಣಮಾಲೆಯ ಎಲ್ಲ ಅಕ್ಷರಗಳನ್ನೂ ಮೊದಲು ತಿದ್ದಿ ಹಾಕಿ ಕಲಿಸಿದರೆ ಒತ್ತಕ್ಷರ, ಕಾಗುಣಿತ ಇಲ್ಲದ ಎಲ್ಲ ಪದಗಳನ್ನೂ ಮಕ್ಕಳು ಓದಬಹುದಲ್ಲವೆ ? ಅಕ್ಷರಜ್ಞಾನವೇ ಇಲ್ಲದೆ ಪದಗಳನ್ನು ಓದಿಸಲು ನಡೆಸುವ ಯತ್ನ ಕಠಿಣವಲ್ಲವೆ? ಎಂಬ ಪ್ರಶ್ನೆಗಳು ಏಳುತ್ತವೆ. ನಿಜ, ಕನ್ನಡದ ಬಗ್ಗೆ ಹೇಳುವುದಾದರೆ ಇಂಥ ಅಕ್ಷರಮೂಲ ಬೋಧನಕ್ರಮ ಲಾಭದಾಯಕವೆ. ಆದರೆ ಅಕ್ಷರವನ್ನು ಮಕ್ಕಳಿಗೆ ಕಲಿಸುವುದೂ ಅವರಿಗೆ ಅರ್ಥವಾಗದ ಸಂಕೇತಗಳಿಗೆ ಧ್ವನಿಯನ್ನು ಪರಿಚಯ ಮಾಡಿಕೊಡುವುದೂ ಅಷ್ಟೇ ಕಷ್ಟವಾಗುವುದಿಲ್ಲವೆ ? ಆದ್ದರಿಂದ ಈಚೆಗೆ ಅಕ್ಷರಮೂಲ ಮತ್ತು ಪದಮೂಲ ಬೋಧನ ಕ್ರಮಗಳೆರಡನ್ನೂ ಒಟ್ಟುಗೂಡಿಸುವ ಯತ್ನ ನಡೆಯುತ್ತಿದೆ. ಇದೇ ಕ್ರಮವನ್ನು ಬಾಲಬೋಧೆಯನ್ನು ರಚಿಸುವಾಗಲೂ ಅನುಸರಿಸಲಾಗುತ್ತದೆ. ಮಕ್ಕಳ ಆಸಕ್ತಿಗೆ ನಿಲುಕುವ ಪದಗಳನ್ನು ಓದುವುದರಿಂದಲೇ ಪಾಠವನ್ನು ಆರಂಭಿಸಿದರೂ ಆ ಪದಗಳಲ್ಲಿರುವ ಅಕ್ಷರಗಳ ಪರಿಚಯವನ್ನು ಅಂದಿಗಂದಿಗೆ ಮಾಡಿಕೊಡುವುದರಿಂದ ಕ್ರಮೇಣ ಎಲ್ಲ ಅಕ್ಷರಗಳನ್ನೂ ಗುರುತಿಸುವುದನ್ನು ಕಲಿಯುವರು. ಹಾಗೂ ಮೊದಲು ಕಾಗುಣಿತರಹಿತವೂ ಒತ್ತಕ್ಷರಗಳಿಲ್ಲದವೂ ಆದ ಪದಗಳನ್ನು ಹಲವಾರು ಪಾಠಗಳಲ್ಲಿ ಕಲಿಸಿ ವರ್ಣಮಾಲೆಯ ಮುಖ್ಯ ಬಳಕೆಯ ಅಕ್ಷರಗಳನ್ನೆಲ್ಲ ಗುರುತಿಸುವಂತಾದ ಮೇಲೆ ಕ್ರಮಕ್ರಮವಾಗಿ ಕಾಗುಣಿತಾಕ್ಷರಗಳನ್ನೂ ಒತ್ತಕ್ಷರಗಳನ್ನೂ ಒಳಗೊಂಡ ಪದಗಳನ್ನು ತರುವುದು ಸೂಕ್ತವೆನಿಸುತ್ತದೆ. ಇದರಿಂದ ಮಕ್ಕಳ ಆಸಕ್ತಿಯನ್ನೂ ಬಳಸಿಕೊಂಡಂತಾಗುತ್ತದೆ-ಇದು ಮನೋವಿಜ್ಞಾನಕ್ಕೆ ಸಮ್ಮತವೆನಿಸುವ ಕ್ರಮ; ಜೊತೆಗೆ, ವರ್ಣಮಾಲೆಯ ಅಕ್ಷರಗಳ ಧ್ವನಿ ನಿರ್ದಿಷ್ಟತೆಯ ಸೌಲಭ್ಯವನ್ನೂ ಬಳಸಿಕೊಂಡಂತಾಗುತ್ತದೆ. ಮೊದಲ ಪುಸ್ತಕ ಮುಗಿಯುವ ವೇಳೆಗೆ ಅಕ್ಷರಗಳನ್ನು ಗುರುತಿಸಿ ಕೂಡಿಸಿ ಪದಗಳನ್ನು ಉಚ್ಚರಿಸುವುದು ತಕ್ಕಮಟ್ಟಿಗೆ ಸಿದ್ಧಿಸುತ್ತದೆ. ಪುಸ್ತಕದ ಕೊನೆಯಲ್ಲಿ ಬರುವ ಕಥೆ, ಪ್ರವಾಸ, ವಿವರಣೆ ಇತ್ಯಾದಿ ಪಾಠಗಳು ಓದುಗಾರಿಕೆಗೆ ಪ್ರೇರಕವಾಗುವಂಥ ವಸ್ತುವಿನಿಂದ ರಚನೆಯಾಗಿದ್ದರೆ ಓದುವುದರಲ್ಲಿ ಅವರಿಗೇ ವಿಶೇಷ ಆಸಕ್ತಿ ಮೂಡುತ್ತದೆ. ಅಂದಿಗಂದಿಗೆ ಮಕ್ಕಳಿಗೆ ಅಭ್ಯಾಸ ರೂಪದಲ್ಲಿ ಹಾಕುವ ಪ್ರಶ್ನೆಗಳಿಂದಲೂ ಮುದ್ರಿತ ಪಾಠದಿಂದ ಉತ್ತರ ಹುಡುಕಿಸುವಾಗಲೂ ಈ ಆಸಕ್ತಿ ಹೆಚ್ಚುವುದಲ್ಲದೆ ಪದಗಳನ್ನು ಗುರುತಿಸುವ ಶಕ್ತಿಯೂ ಬಲಗೊಳ್ಳುತ್ತದೆ.

 ಡೇನಿಯಲ್ ಕ್ರಮ 
ಈಚೆಗೆ ಡೇನಿಯಲ್ ಎಂಬ ತಜ್ಞ ಇಂಗ್ಲಿಷನ್ನು ಕಲಿಸಲು ಇಡೀ ಪದದ ಧ್ವನಿಯನ್ನು ಒಂದು ಘಟಕವನ್ನಾಗಿ ಮಾಡಿಕೊಂಡು ಬೋಧಿಸುವ ಹೊಸ ಕ್ರಮವನ್ನು ರೂಪಿಸಿದ್ದಾನೆ. ಪರಿಚಿತ ಪದವೊಂದನ್ನು ಚಿತ್ರ, ಸಂಭಾಷಣೆ ಇತ್ಯಾದಿ ಸಾಧನಗಳಿಂದ ಕಲಿಸಿ ಆ ಪದದ ಸಮಗ್ರ ಧ್ವನಿ ನಿರೂಪಣೆಯಲ್ಲಿ ಪ್ರತಿ ಅಕ್ಷರದ ಧ್ವನಿಯನ್ನೂ ಪ್ರಯೋಗ ಕ್ಷೇತ್ರವನ್ನೂ ಪರಿಚಯ ಮಾಡಿಕೊಡಬೇಕು. ಆದರೆ ಮತ್ತೊಂದು ಪದವನ್ನು ಕಲಿಸುವಾಗ ಅನೇಕ ವೇಳೆ ಆ ಅಕ್ಷರಗಳು ಧ್ವನಿ ರೂಪಣೆಯಲ್ಲಿ ಅದೇ ಪಾತ್ರವನ್ನು ವಹಿಸದಿರಬಹುದು. ಆದ್ದರಿಂದ ನಿತ್ಯಜೀವನದಲ್ಲಿ ಬಳಸುವ ಅನೇಕ ಪದಗಳನ್ನು ಕಲಿಸಿ ಆಯಾ ಪದದಲ್ಲಿ ಪ್ರತಿ ಅಕ್ಷರವೂ ವಹಿಸುವ ಧ್ವನಿಪಾತ್ರವನ್ನು ಗುರುತಿಸುವುದನ್ನು ಕಲಿಸಬೇಕು. ಇದರಿಂದ ಸಾಮಾನ್ಯ ಪದಗಳನ್ನೂ ಪದಪುಂಜಗಳನ್ನೂ ಓದುವುದು ಸರಾಗವಾಗುತ್ತದೆ. ಈ ಸಂಯೋಜಿತ ಕ್ರಮದಲ್ಲಿ ಅಕ್ಷರಮೂಲ ಪದ್ಧತಿಯಂತೆ ಪದಮೂಲ ಪದ್ಧತಿಯನ್ನೂ ಬಳಸಿಕೊಂಡಿರುವುದು ಸ್ಪಷ್ಟಪಡುತ್ತದೆ.

 ಪಿಟ್ಮನ್ನನ ಕ್ರಮ 
ಈಚೆಗೆ ಎಂದರೆ ಕಳೆದ ದಶಮಾನದಿಂದ ಇಂಗ್ಲೆಂಡಿನಲ್ಲೂ ಅಮೆರಿಕದಲ್ಲೂ ಹೊಸದೊಂದು ಯತ್ನ ನಡೆಯುತ್ತಿದೆ. ಪಿಟ್ಮನ್ ಎಂಬಾತ ಓದುಗಾರಿಕೆಯ ಪ್ರಥಮ ಬೋಧನೆಯ ವರ್ಣಮಾಲೆ ಐಟಿಎ (ಇನಿಷಿಯಲ್ ಟೀಚಿಂಗ್ ಆಲ್ಫಬೆಟ್) ಎಂಬ ಒಂದು ಪಟವನ್ನು ತಯಾರಿಸಿದ. ಅದರಲ್ಲಿ ಅಕ್ಷರಗಳು ರೋಮನ್ ಲಿಪಿಯಲ್ಲಿವೆ (q ಮತ್ತು x ಇಲ್ಲ), ಜೊತೆಗೆ x,ಇಇ ಇತ್ಯಾದಿ ಅಕ್ಷರಗಳ ಸಂಯೋಗದಿಂದ 14 ವಿಶಿಷ್ಟ ಧ್ವನಿಘಟಕಗಳ ಸಂಕೇತಗಳನ್ನೂ ರೂಪಿಸಿದ. ಇಂಗ್ಲೆಂಡ್ ಮತ್ತು ಕೆನಡ ದೇಶಗಳಲ್ಲಿ ಐಟಿಎ ವರ್ಣಮಾಲೆಯ ಕ್ರಮದಿಂದ ಬೋಧಿಸಲು ಯತ್ನಿಸಿ ಉತ್ತಮ ಫಲಿತಾಂಶ ಪಡೆಯಲಾಗಿದೆ. ಆದರೆ ಐಟಿಎ ಕೇವಲ ಒಂದು ಉಪಕರಣ, ಕೆಲವು ಅಕ್ಷರಗಳನ್ನೂ ಕೆಲವು ಪದಗಳನ್ನೂ ಗುರುತಿಸಲು ಮಾತ್ರ ಅದು ಅನುಕೂಲಿಸುವುದು ಎಂಬುದರ ಅರಿವಾದಂತೆ ಅದಕ್ಕಿದ್ದ ಪ್ರಾಮುಖ್ಯ ಕಡಿಮೆಯಾಗುತ್ತಿದೆ.

ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ತಮ್ಮ ಅನುಭವಕ್ಕೆ ಬಂದಿರುವ ಪದಗಳನ್ನು ಗುರುತಿಸುವುದನ್ನು ಕಲಿಯುವರು; ಮಾಧ್ಯಮಿಕ ಅಂತಸ್ತಿನಲ್ಲಿ ಅನೇಕ ಹೊಸ ಪದಗಳು ಅವರ ಗಮನಕ್ಕೆ ಬರುತ್ತವೆ. ಅವನ್ನು ಓದಿ ಅರ್ಥ ಗ್ರಹಿಸಲು ನಿಘಂಟಿನ ಬಳಕೆ ಅಗತ್ಯವಾಗುತ್ತದೆ. ಅಂಥ ನೂತನ ಪದಗಳನ್ನು ವಿವರಣೆ, ಚಿತ್ರ ಮಾದರಿ ಇತ್ಯಾದಿಗಳ ಹಿನ್ನೆಲೆಯಲ್ಲಿ ಪರಿಚಯ ಮಾಡಿಕೊಡುವುದು ಸುಲಭ. ಆ ವೇಳೆಗೆ ಇತರ ವಿಷಯಗಳ ವ್ಯಾಸಂಗದಲ್ಲೂ ಓದುಗಾರಿಕೆಯ ಬಳಕೆಯಾಗಿ ಪದಸಂಪತ್ತು ವೃದ್ಧಿಯಾಗಿರುತ್ತದೆ. ಆ ಬಗ್ಗೆಯೂ ನಿರ್ದಿಷ್ಟ ಬೋಧನಕಾರ್ಯಕ್ರಮ ಅಗತ್ಯ. ಅಧ್ಯಾಪಕರು ನೂತನ ಪದಗಳನ್ನು ಅವರ ಗಮನಕ್ಕೆ ತರುವುದರ ಜೊತೆಗೆ ಅವುಗಳ ಅರ್ಥವನ್ನು ಪರಿಚಯ ಮಾಡಿಕೊಳ್ಳುವುದಕ್ಕೂ ಅವನ್ನು ಬಳಸುವುದಕ್ಕೂ ಅವಕಾಶ ಕಲ್ಪಿಸಬೇಕು. 

ಅರ್ಥಗ್ರಹಣ ಮತ್ತÄ ಗುರುತಿಸಿ ಓದುವ ಕಾರ್ಯ ಪ್ರಾಥಮಿಕ ಶಾಲೆಯ ಕೊನೆಯ ದಿನಗಳಿಂದ ಹಿಡಿದು ಪ್ರೌಢಶಾಲೆಗಳಲ್ಲೂ ಕಾಲೇಜುಗಳಲ್ಲೂ ಮುಂದುವರಿಯುತ್ತದೆ. ಮೊದಮೊದಲ ಪದಗಳ ಅರ್ಥ ಅವರ ಅನುಭವಕ್ಕೆ ಬಂದವೇ ಆದರೂ ಕ್ರಮಕ್ರಮವಾಗಿ ನೂತನ ಪದಗಳ ಮೂಲಕ ಹೊಸ ಅನುಭವ ಅವರಿಗಾಗುತ್ತದೆ. ಮೇಲ್ಮಟ್ಟಕ್ಕೆ ಹೋದಂತೆ ಪಠ್ಯಗ್ರಂಥಗಳ ವಸ್ತುವೂ ಕಷ್ಟವಾಗುತ್ತ ಹೋಗುತ್ತದೆ. ಪರಿಚಯವಿಲ್ಲದ್ದೂ ಆಗುತ್ತದೆ; ಅಮೂರ್ತ ಸ್ವರೂಪದ್ದೂ ಆಗುವುದುಂಟು. ಸಾಹಿತ್ಯದ ಒಂದು ಕೃತಿಯನ್ನು ಓದಿದಾಗ ಅದರ ಪುರ್ಣಾನುಭವ ಆಗದಿರಬಹುದು. ಅದರ ಅಭಿಪ್ರಾಯ, ಭಾವನೆ, ಕಥಾಕೌಶಲ್ಯ ಇವೆಲ್ಲ ಪರಿಚಯವಾಗಲು ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ ಪಾಠಗಳನ್ನು ಓದಬೇಕಾಗಬಹುದು. ಹೀಗೆ ಮೇಲ್ಮಟ್ಟದಲ್ಲಿ ಓದುಗಾರಿಕೆ ಹೆಚ್ಚಿದಂತೆ ಅರ್ಥಗ್ರಹಣ, ಪದಗಳನ್ನು ಗುರುತಿಸುವಿಕೆ, ಮುಖ್ಯಾಂಶಗಳ ಗ್ರಹಣ, ವಿವರಗಳ ಗ್ರಹಣ, ತೀರ್ಮಾನ ಕೈಗೊಳ್ಳುವುದು, ಅನುಕರಿಸುವುದು, ವಿಮರ್ಶೆ ಇತ್ಯಾದಿಯೆಲ್ಲವೂ ಸೇರಿಕೊಂಡು ಭಾಷೆಯ ಪ್ರಯೋಗದ ವಿವಿಧ ಮುಖಗಳಲ್ಲಿ ಅನುಭವ ಹೆಚ್ಚುತ್ತದೆ.

 ಓದುಗಾರಿಕೆಯ ವೇಗ 
ಪದಗಳನ್ನು ಗುರುತಿಸುವಿಕೆ, ಅರ್ಥಗ್ರಹಣ ಇವು ಉತ್ತಮಗೊಂಡಂತೆ ಓದುಗಾರಿಕೆಯ ವೇಗ ಹೆಚ್ಚುತ್ತ ಹೋಗುತ್ತದೆ. ಪ್ರಾಥಮಿಕ ಶಾಲೆಯ ಮಕ್ಕಳು ಮೌನವಾಗಿ ಓದುವಾಗ ಮಾಧ್ಯಮಿಕ ಶಾಲೆಯ ಮಕ್ಕಳಿಗಿಂತ ನಿಧಾನವಾಗಿ ಓದುತ್ತಾರೆ. ಏಕೆಂದರೆ ಅವರಿಗೆ ಓದುಗಾರಿಕೆಯ ಮೂಲ ಕೌಶಲ್ಯ ಆಗತಾನೇ ಸಿದ್ಧಿಸಿರುತ್ತದೆ. ವಯಸ್ಕರ ಓದುಗಾರಿಕೆಯ ವೇಗದಲ್ಲೂ ಇದೇ ರೀತಿಯ ವ್ಯತ್ಯಾಸ ಕಂಡುಬರುತ್ತದೆ. ಅಲ್ಲದೆ ಕೃತಿಯ ಕ್ಲಿಷ್ಟತೆಯನ್ನನುಸರಿಸಿ ಒಬ್ಬನೇ ಒಂದನ್ನು ವೇಗವಾಗಿಯೂ ಇನ್ನೊಂದನ್ನು ನಿಧಾನವಾಗಿಯೂ ಓದಬಹುದು. ಕಾದಂಬರಿಯಾದರೆ ನಿಮಿಷಕ್ಕೆ ಮುನ್ನೂರು ಪದ ಓದುವವರು ಅರ್ಥಶಾಸ್ತ್ರದಲ್ಲಿ ಇನ್ನೂರರಂತೆ ಓದಬಹುದು; ತಾಂತ್ರಿಕ ವಿಷಯವಾದರೆ ನಿಮಿಷಕ್ಕೆ ನೂರು ಪದಗಳನ್ನು ಮಾತ್ರ ಓದಬಹುದು.

ತರಗತಿಯಲ್ಲಿ ಸೂಕ್ತ ಬೋಧನಕ್ರಮವನ್ನು ಅನುಸರಿಸಿ ಸರಾಗವಾಗಿ ಓದುವುದನ್ನು ಕಲಿಸುವುದರ ಜೊತೆಗೆ ಆ ಮುಖ್ಯವಾಗಿ ಒಳ್ಳೆಯ ಅಭ್ಯಾಸಗಳನ್ನೂ ಮಕ್ಕಳಲ್ಲಿ ಬೆಳೆಸಬೇಕು. ವಿರಾಮ ಕಾಲದಲ್ಲಿ ಆಸಕ್ತಿಯ ವಿಷಯಗಳನ್ನು ಕುರಿತ ತಮ್ಮ ಯೋಗ್ಯತೆಗೆ ನಿಲುಕುವಂಥ ಗ್ರಂಥಗಳನ್ನು ಓದಲು ಪ್ರೋತ್ಸಾಹಿಸಬೇಕು. ವಾಚನ ಗೋಷ್ಠಿಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು. ಗ್ರಂಥಾಲಯವೂ ಅವರ ಆಸಕ್ತಿಯ ವಿಷಯಗಳನ್ನು ಒದಗಿಸಬಲ್ಲ ಪುಸ್ತಕಗಳನ್ನು ಸಂಗ್ರಹಿಸಬೇಕು. ಶಾಲಾಕಾಲೇಜುಗಳು ಕ್ರಮಕ್ರಮವಾಗಿ ವಿದ್ಯಾರ್ಥಿಗಳಲ್ಲಿ ಓದುಗಾರಿಕೆಯ ಆಸಕ್ತಿಯನ್ನು ಗ್ರಂಥಾಭ್ಯಾಸದ ಮಟ್ಟದ ಆಸಕ್ತಿಯಾಗಿ ರೂಢಿಸಿಕೊಡಬೇಕು.

 ಓದುಗಾರಿಕೆಗೆ ಸೂಕ್ತ ಸನ್ನಿವೇಶಗಳು 
ಬೆಳಕು ಕಡಿಮೆಯಾದರೆ ಓದಲು ತೊಂದರೆಯಾಗುವುದು; ತರಗತಿಯಲ್ಲಿ 10 ಪುಟ್ ಕ್ಯಾಂಡಲ್ ಬೆಳಕಿಗಿಂತ ಕಡಿಮೆಯಿರಬಾರದು. ಮುದ್ರಣವಾಗಿರುವ ಕಾಗದ ಹೊಳೆಯದಂತೆ ಸ್ವಲ್ಪ ಮಾಸಲು ಬಿಳುಪಾಗಿರುವುದು ಉತ್ತಮ. ವಿವಿಧ ಬಣ್ಣಗಳ ಬೆರಕೆಗಿಂತ ಬಿಳಿಯ ಕಾಗದದ ಮೇಲೆ ಕಪ್ಪು ಮುದ್ರಣವಿದ್ದಲ್ಲಿ ಓದುಗಾರಿಕೆಗೆ ತೀರ ಪರಿಣಾಮಕಾರಿಯಾದ ಹಿನ್ನೆಲೆ ದೊರೆತಂತಾಗುತ್ತದೆ.

ಮುದ್ರಣಾಕ್ಷರಗಳ ಆಕಾರ: ಸಿರಿಲ್ ಬರ್ಟ್ ಎಂಬ ಇಂಗ್ಲಿಷ್ ಶಿಕ್ಷಣ ಸಂಶೋಧಕ ಸೂಚಿಸುವಂತೆ 7 ವರ್ಷಕ್ಕೂ ಕಡಿಮೆ ಮಕ್ಕಳ ಪುಸ್ತಕ 24 ಪಾಯಿಂಟ್ನಲ್ಲೂ 7-8 ವರ್ಷದವರಿಗೆ 18 ಪಾಯಿಂಟ್ನಲ್ಲೂ 8-9 ವರ್ಷದವರಿಗೆ 16 ಪಾಯಿಂಟ್ನಲ್ಲೂ 9-10 ವರ್ಷದವರಿಗೆ 14 ಪಾಯಿಂಟ್ನಲ್ಲೂ 10-12 ವರ್ಷದವರಿಗೆ 12 ಪಾಯಿಂಟ್ನಲ್ಲೂ 12 ವರ್ಷಗಳಿಗಿಂತ ಮೇಲ್ಪಟ್ಟವರಿಗೆ 11 ಪಾಯಿಂಟ್ನಲ್ಲೂ ಇರುವುದು. ಒಳ್ಳೆಯದೆಂದು ಸೂಚಿಸಿದ್ದಾನೆ. ಚಿಕ್ಕವರಿಗೆ ಪದಗಳ ನಡುವೆ ಹೆಚ್ಚು ಅಂತರ ಇರುವುದು ಅಗತ್ಯ. ಪಂಕ್ತಿ 3 ಅಂಗುಲಕ್ಕಿಂತ ಹೆಚ್ಚು ಉದ್ದವಾಗಿರಬಾರದು.

 
 ಓದುಗಾರಿಕೆಯಲ್ಲಿ ಅಭಿರುಚಿ 
ಹೆಣ್ಣು ಮತ್ತು ಗಂಡುಮಕ್ಕಳ ಓದುಗಾರಿಕೆಯ ಅಭಿರುಚಿಗಳಲ್ಲಿ ವ್ಯತ್ಯಾಸವಿದೆ. ಬಾಲಕರು ಸಾಹಸ, ರಚನೆ, ಹವ್ಯಾಸ, ವಿಜ್ಞಾನ ಇಂಥ ಪುಸ್ತಕಗಳನ್ನೋದುವರು. ಬಾಲಕಿಯರು ಮನೆಗೆಲಸ, ಕಲ್ಪನೆ, ಸಾಹಸ, ಮನೋರಂಜನೆ ಇತ್ಯಾದಿ ಕೃತಿಗಳನ್ನು ಓದುವರು. ಯುವತಿಯರು ಪ್ರಣಯದ ಕಥೆ, ಕಾದಂಬರಿ ಮತ್ತು ಯುವಜನರ ಕಥೆಗಳನ್ನು ಓದುವರು. ಅಂತಾರಾಷ್ಟ್ರೀಯ ತಿಳಿವಳಿಕೆ, ವೈಯಕ್ತಿಕ ಆರೋಗ್ಯ-ಇವೆರಡನ್ನು ಕುರಿತ ಗ್ರಂಥಗಳ ವಾಚನ ಯುವಕ ಯುವತಿಯರಿಗೆ ಉಭಯಸಾಮಾನ್ಯ. ವಯಸ್ಕರ ಓದುವ ಅಭಿರುಚಿ ಅವರು ಪಡೆದಿರುವ ಶಿಕ್ಷಣ, ಮಾಡುತ್ತಿರುವ ಉದ್ಯೋಗ, ಲಿಂಗ ಮತ್ತು ವಾಸಿಸುವ ಸನ್ನಿವೇಶ-ಇವುಗಳನ್ನು ಅನುಸರಿಸಿ ಭಿನ್ನವಾಗಿರುತ್ತದೆ. ಅಧ್ಯಾಪಕರು ಈ ಅಂಶಗಳನ್ನೂ ಮನದಟ್ಟು ಮಾಡಿಕೊಂಡು ಅವರಿಗೆ ಓದುಗಾರಿಕೆಯಲ್ಲಿ ಸಲಹೆ ನೀಡಬೇಕು.

ಓದುಗಾರಿಕೆ ಮಾತಿಗೆ ಪ್ರಾಧಾನ್ಯವುಳ್ಳ ಕೌಶಲ. ಆದ್ದರಿಂದ ಅದನ್ನು ಬೋಧಿಸುವಾಗ ಯಾವ ಕ್ರಮವನ್ನೇ ಅನುಸರಿಸಲಿ ಸ್ಪಷ್ಟವಾಗಿ ಅಕ್ಷರಗಳನ್ನೂ ಪದಗಳನ್ನೂ ವಾಕ್ಯಗಳನ್ನು ಉಚ್ಚರಿಸುವ ಕಾರ್ಯಕ್ಕೆ ಅಧ್ಯಾಪಕರು ಮೊದಲಿಂದಲೂ ಗಮನ ಕೊಡುವುದು ಅಗತ್ಯ. ಓದುಗಾರಿಕೆಯ ಕಲಿವು ನೈಜ ಸನ್ನಿವೇಶದಲ್ಲಿ ಬರೆವಣಿಗೆಯೊಡನೆ ಜೊತೆಜೊತೆಯಾಗಿಯೇ ಸಾಗುತ್ತದೆ. ಆದ್ದರಿಂದ ಬರೆಯುವಾಗಲೂ ಸ್ಪಷ್ಟವಾಗಿ ಉಚ್ಚರಿಸುವುದನ್ನೇ ಕಲಿಸುತ್ತ ಹೋಗಬೇಕು. ನೂತನ ಪದಗಳನ್ನು ಅಧ್ಯಾಪಕರು ಆದರ್ಶವಾಗಿ ಉಚ್ಚರಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಒಮ್ಮೆ ಹಾಗೆ ಕೇಳಿದ ಪದ, ಪದಪುಂಜ, ನುಡಿಗಟ್ಟು ಇತ್ಯಾದಿಗಳು ಮಕ್ಕಳ ಮನಸ್ಸಿನಲ್ಲಿ ಸ್ಫುಟಗೊಳ್ಳಬೇಕು. ಈಚೆಗೆ ಪದ್ಯ, ಗದ್ಯ, ಇತ್ಯಾದಿ ಕೃತಿಗಳನ್ನು ಆದರ್ಶವಾಗಿ ವಾಚಿಸಿರುವ ಧ್ವನಿಮುದ್ರಿಕೆಗಳನ್ನು ಈ ಕಾರ್ಯದಲ್ಲಿ ಬೋಧನೋಪರಣಗಳನ್ನಾಗಿ ಬಳಸಿಕೊಳ್ಳುತ್ತಿರುವರು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಅಂತಸ್ತಿನಲ್ಲಿ ಭಾಷೆಯ ಬಳಕೆಯನ್ನೊಳಗೊಂಡ ವಿಧವಿಧವಾದ ಸಾಮೂಹಿಕ ಕಾರ್ಯಗಳಿಗೂ ಅವಕಾಶ ಕಲ್ಪಿಸಬಹುದು.	(ಎನ್.ಎಸ್.ವಿ.)

 ಓದುಗಾರಿಕೆಯಲ್ಲಿ ನಿವಾರಕ ಬೋಧನೆ 
ವಿದ್ಯಾರ್ಥಿಗಳ ಓದುಗಾರಿಕೆಯಲ್ಲಿ ಕಂಡುಬರುವ ವಿಶಿಷ್ಟ ದೋಷಗಳ್ನು ನಿವಾರಿಸಲು ಯತ್ನಿಸುವಾಗ ಈ ತತ್ತ್ವಗಳನ್ನು ಅನುಸರಿಸಬೇಕು. (ಅ) ಪ್ರತಿ ವಿದ್ಯಾರ್ಥಿಯ ಓದಿನಲ್ಲಿ ಕಂಡುಬರುವ ದೋಷಗಳನ್ನೂ ಅವುಗಳ ಸ್ವಭಾವ ಮತ್ತು ಕಾರಣಗಳನ್ನೂ ಶಾಸ್ತ್ರೀಯವಾಗಿ ಪರಿಶೀಲಿಸಬೇಕು; (ಆ) ಪ್ರತಿ ವಿದ್ಯಾರ್ಥಿಯ ಎಲ್ಲ ವಿವರಗಳನ್ನೂ ಅಂದರೆ, ಅವನ ಸ್ವಭಾವ, ಬುದ್ಧಿಶಕ್ತಿ, ಅಭಿರುಚಿಗಳು, ಕೌಟುಂಬಿಕ ಹಿನ್ನೆಲೆ, ಶಾಲಾಪ್ರಗತಿ-ಮುಂತಾದವುಗಳನ್ನು ಸಂಗ್ರಹಿಸಬೇಕು; (ಇ) ಪ್ರತಿ ವಿದ್ಯಾರ್ಥಿಯ ದೋಷ ಮತ್ತು ಮಟ್ಟಕ್ಕನುಗುಣವಾಗಿ ಬೋಧನ ಕ್ರಮವನ್ನು ರೂಪಿಸಬೇಕು; (ಈ) ನಿವಾರಕ ಪಾಠಕ್ರಮಗಳಲ್ಲಿ ಪ್ರತಿ ವಿದ್ಯಾರ್ಥಿ ಒಳ್ಳೆಯ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ, ಅವನಿಗೆ ಆಗಾಗ್ಗೆ ಈ ಕ್ರಮಗಳ ಉದ್ದೇಶ ಮತ್ತು ಅವನು ಸಾಧಿಸುತ್ತಿರುವ ಪ್ರಗತಿಯನ್ನು ತಿಳಿಸುತ್ತಿರಬೇಕು.

ಮೇಲೆ ತಿಳಿಸಿದ ಕೆಲವು ತತ್ತ್ವಗಳ ಆಧಾರದ ಮೇಲೆ ವೈಯಕ್ತಿಕ ಅಥವಾ ಸಾಮೂಹಿಕ ಸಂದರ್ಭಗಳಲ್ಲಿ ಕೈಗೊಳ್ಳುವ ನಿವಾರಕ ಕ್ರಮಗಳನ್ನು 3 ಹಂತಗಳನ್ನಾಗಿ ವಿಭಾಗಿಸಬಹುದು; 1 ದೋಷಗಳ ಸ್ವರೂಪ ನಿರ್ಣಯ; 2 ಕೆಲವು ಶಾರೀರಕ ಮತ್ತು ಮಾನಸಿಕ ದೋಷಗಳ ನಿವಾರಣೆ; 3 ನಿವಾರಕ ಬೋಧನಕ್ರಮದ ವ್ಯವಸ್ಥೆ.

1 ದೋಷಗಳ ಸ್ವರೂಪ ನಿರ್ಣಯ: ತಜ್ಞರು ವಿದ್ಯಾರ್ಥಿಗಳನ್ನು ವಿವರವಾಗಿ ಪರೀಕ್ಷಿಸಿ, ಓದಿನ ನ್ಯೂನತೆಗಳ ನಿರ್ದಿಷ್ಟ ಸ್ವರೂಪವನ್ನು ನಿರ್ಧರಿಸುವರು. ಮನೋವಿಜ್ಞಾನಿಗಳು, ವೈದ್ಯರು, ಸಮಾಜಸೇವಾ ಕಾರ್ಯಕರ್ತರು, ವಿಶೇಷ ತರಬೇತು ಪಡೆದ ಉಪಾಧ್ಯಾಯರು, ವಾಕ್ಚಿಕಿತ್ಸೆ ನಡೆಸಬಲ್ಲವರು ಈ ಕಾರ್ಯದಲ್ಲಿ ನೆರವಾಗಬೇಕು, ಹಲವು ಪ್ರಯೋಗಗಳ ಸಹಾಯದಿಂದ ಓದಿನ ದೋಷಗಳನ್ನೂ ಅವುಗಳ ಕಾರಣಗಳನ್ನೂ ಆರು ಮುಖ್ಯ ವಿಧಗಳನ್ನಾಗಿ ವಿಂಗಡಿಸಿದ್ದಾರೆ. ಆ ವಿಧಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ವಿವರಿಸಿದೆ. (ಅ) ಓದುವಾಗ ತೊಡರುವುದು, ಪದಗಳನ್ನು ಬಿಡುವುದು, ತಪ್ಪಾದ ಉಚ್ಚಾರಣೆ, ಒಂದು ಪದಕ್ಕೆ ಬದಲಾಗಿ ಮತ್ತೊಂದು ಪದವನ್ನು ಹೇಳುವುದು, ಹೊಸದಾಗಿ ಪದಗಳನ್ನು ಸೇರಿಸಿಕೊಂಡು ಓದುವುದು, ಪದಗಳ ಅನಾವಶ್ಯಕ ಪುನರುಚ್ಚಾರಣೆ-ಇವು ಪುರ್ತಿಯಾಗಿ ಅರ್ಥಕೊಡುವ ಪದಪುಂಜಗಳನ್ನು ಓದದೆ, ಬಿಡಿಬಿಡಿಯಾಗಿ, ಅಕ್ಷರ ಅಥವಾ ಪದಗಳನ್ನು ಸೇರಿಸಿ ಓದುವ ಅಭ್ಯಾಸದಿಂದ, ಪದಸಂಪತ್ತಿನ ಅಭಾವದಿಂದ, ಅಜಾಗರೂಕತೆಯಿಂದ, ಕೇವಲ ಸಂದರ್ಭಕ್ಕೆ ತಕ್ಕಂತೆ ಪದಗಳನ್ನು ಊಹಿಸುವುದರಿಂದ, ಗಡಿಬಿಡಿಯಾಗಿ ಓದುವುದರಿಂದ ಮೂಡಿಕೊಳ್ಳುತ್ತವೆ. (ಆ) ಓದುವಾಗ ಬಹುಬೇಗ ಆಯಾಸಗೊಳ್ಳುವುದು, ಚಂಚಲತೆ, ಕಣ್ಣುಗಳಿಗೆ ಬಹು ಸಮೀಪದಲ್ಲಿ ವಸ್ತುಗಳನ್ನು ಹಿಡಿದುಕೊಳ್ಳುವುದು-ಇವು ಕಣ್ಣು ಅಥವಾ ಕಿವಿಗಳ ದೋಷಗಳಿಂದ, ಸಾಕಷ್ಟು ವಿಶ್ರಾಂತಿ, ನಿದ್ರೆಗಳ ಅಭಾವದಿಂದ, ಮೂಡಿಕೊಳ್ಳುತ್ತವೆ. (ಇ) ಪದಗಳನ್ನು ಉಚ್ಚರಿಸುವಾಗ ಅತಿ ಪ್ರಯಾಸಪಡುವುದು, ತೊದಲುವುದು, ಕೆಲವು ಶಬ್ದಗಳನ್ನು ಉಚ್ಚರಿಸಲು ಅಸಮರ್ಥನಾಗಿರುವುದು, ಕೆಲವು ಶಬ್ದಗಳನ್ನೇ ನುಂಗುವುದು-ಈ ರೀತಿಯ ತೊಂದರೆಗಳು ಮಾನಸಿಕ ಅಥವಾ ಶಾರೀರಿಕ ಕಾರಣಗಳಿಂದ ಬರುತ್ತವೆ. ಕಿವುಡು, ಗಂಟಲು ರೋಗಗಳು, ನಾಲಿಗೆ ಮತ್ತು ಹಲ್ಲುಗಳ ದೋಷ-ಇವು ಶಾರೀರಿಕ ಕಾರಣಗಳಲ್ಲಿ ಮುಖ್ಯವಾದುವು; ಮಂದಬುದ್ಧಿ ಭಾವೋದ್ರೇಕ-ಅಂದರೆ ಅತಿಯಾಗಿ, ಅತಿಜಾಗ್ರತೆಯಾಗಿ ಉದ್ರೇಕಗೊಳ್ಳುವ ಅಥವಾ ಗಾಬರಿಪಡುವ ಸ್ವಭಾವ-ಇವು ಮಾನಸಿಕ ಕಾರಣಗಳು. (ಈ) ಓದಿದ ಅಂಶಗಳನ್ನು ಗ್ರಹಿಸುವುದರಲ್ಲಿ ಸಾವಕಾಶ ಅಥವಾ ತೊಂದರೆ, ಓದಿನಲ್ಲಿ ವಿಚಾರಶೀಲತೆಯ ಅಭಾವ, ಅಂಶಗಳ ಔಚಿತ್ಯವನ್ನು ನಿರ್ಧರಿಸಲು ಅಸಮರ್ಥನಾಗಿರುವುದು, ಉದ್ದೇಶಕ್ಕನುಸಾರವಾಗಿ ಓದಿನಲ್ಲಿ ಯಾವ ಮಾರ್ಪಾಟನ್ನೂ ತಾಳದಿರುವುದು-ಇವು ವಿದ್ಯಾರ್ಥಿಯ ಕೆಲವು ಅಹಿತ ಮನೋಭಾವಗಳಿಂದ ಬರುತ್ತವೆ. ಅಲ್ಲದೆ, ಓದುವಾಗ ಯಾವ ಉದ್ದೇಶವನ್ನೂ ಇಟ್ಟುಕೊಳ್ಳದೆ, ನಿರ್ಲಕ್ಷ್ಯದಿಂದ, ಅರ್ಥದ ಕಡೆಗೆ ಗಮನ ಕೊಡದೆ ಕೇವಲ ಅಕ್ಷರಗಳನ್ನು ಅಥವಾ ಪದಗಳನ್ನು ಗುರುತಿಸುವುದರಿಂದಲೂ ಈ ದೋಷಗಳು ಬೆಳೆಯುತ್ತವೆ. (ಉ) ಓದುವಾಗ ಸ್ಥಿರಮನಸ್ಕನಾಗಿರದಿರುವುದು, ಓದುವ ಮುನ್ನವೇ ವೃಥಾ ಕಾಲವ್ಯಯ ಮಾಡುವುದು, ಉದಾಸೀನ ಭಾವದಿಂದ ಕೂಡಿರುವುದು-ಇವು ವಿದ್ಯಾರ್ಥಿಯ ಆಸಕ್ತಿ ಮತ್ತು ಅಭಿರುಚಿಗಳಿಗೆ ತಕ್ಕಂತೆ ಪಠ್ಯಪುಸ್ತಕಗಳು ಹಾಗೂ ಓದುವ ಸಾಧನಗಳಿಲ್ಲದಿರುವುದು, ಏಕಾಗ್ರತೆಯನ್ನು ಕದಡುವ ಅಶಾಂತ ವಾತಾವರಣ, ಉತ್ತೇಜನದ ಅಭಾವ, ಶಾಲೆ ಮತ್ತು ಸ್ಥಳಗಳನ್ನು ಪದೇ ಪದೇ ಬದಲಾಯಿಸುವುದು. ವ್ಯಾಸಂಗ ಕ್ರಮದಲ್ಲಿನ ಅನೇಕ ದೋಷಗಳು, ಮಾನಸಿಕ ವ್ಯಾಕುಲತೆಗಳು-ಇವುಗಳಿಂದ ಬೆಳೆಯುತ್ತವೆ. (ಊ) ತನ್ನ ಓದಿಗೆ ಬೇಕಾದ ಆವಶ್ಯಕ ಆಧಾರ ಪುಸ್ತಕಗಳನ್ನು, ಶಬ್ದಸೂಚಿ, ನಿಘಂಟು ಮುಂತಾದ ಉಪಯುಕ್ತ ಸಹಾಯಕ ವಸ್ತುಗಳನ್ನು ಉಪಯೋಗಿಸಲು ಅಸಮರ್ಥನಾಗಿರುವುದು, ಇಂಥ ಸಾಮಾನ್ಯ ದೋಷಗಳು ವಿದ್ಯಾರ್ಥಿಯ ಅಲ್ಪ ಅನುಭವ, ಅಜ್ಞಾನ, ಓದುವ ಅಭ್ಯಾಸವನ್ನು ಸಾಕಷ್ಟು ಚೆನ್ನಾಗಿ ರೂಢಿಸಿಕೊಳ್ಳದೆ ಇರುವುದು-ಇವುಗಳಿಂದ ಬರುತ್ತವೆ.
ಓದುಗಾರಿಕೆಯ ದೋಷಗಳನ್ನು ಕಂಡುಹಿಡಿಯುವ ಮಾರ್ಗಗಳು: ಪಾಶ್ಚಾತ್ಯ ಮತ್ತು ಇತರ ಪ್ರಗತಿಪರ ದೇಶಗಳಲ್ಲಿ ಓದಿಗೆ ಸಂಬಂಧಪಟ್ಟ ಹಲವಾರು ಸಂಶೋಧನೆಗಳು ನಡೆದಿವೆ. ಇತ್ತೀಚೆಗೆ ಭಾರತದಲ್ಲೂ ಕೆಲವು ಪ್ರಯೋಗಗಳು ನಡೆಯುತ್ತಿವೆ. ಇವುಗಳ ಫಲವಾಗಿ, ಓದಿನ ಅಂಶಗಳನ್ನು-ಅಂದರೆ ಓದಿನ ವೇಗ, ವಿಷಯಗ್ರಹಣ, ಪದಪರಿಚಯ, ಕಣ್ಣುಗಳ ಚಲನೆ ಮುಂತಾದುವುಗಳನ್ನು-ಅಳೆಯುವ ಪರೀಕ್ಷೆಗಳು ಮತ್ತು ಉಪಕರಣಗಳೂ ಸಿದ್ಧವಾಗಿವೆ. ಇವುಗಳ ಸಹಾಯದಿಂದ ವಿದ್ಯಾರ್ಥಿಯ ಓದಿನ ಮಟ್ಟವನ್ನು ನಿರ್ದಿಷ್ಟವಾಗಿ ಅರಿಯಬಹುದು. ಇವುಗಳ ಜೊತೆಗೆ ವಿದ್ಯಾರ್ಥಿಯನ್ನು ಸಂದರ್ಶಿಸುವುದು, ಅವನು ಓದುವಾಗ ದೋಷಗಳನ್ನು ನೇರವಾಗಿ ಗಮನಿಸುವುದು-ಇವು ಸಾಮಾನ್ಯವಾಗಿ ಅನುಸರಿಸುವ ಇತರ ಮಾರ್ಗಗಳು.

ಮಾನಸಿಕ ಮತ್ತು ಶಾರೀರಕ ದೋಷಗಳ ನಿವಾರಣೆ ಇವು: ವಿದ್ಯಾರ್ಥಿಯನ್ನು ಪುರ್ಣವಾಗಿ ಪರೀಕ್ಷಿಸಿದ ಅನಂತರ ನಿವಾರಕ ಬೋಧನ ಕ್ರಮಕ್ಕೆ ಮೊದಲು, ಕೆಲವು ಶಾರೀರಿಕ ಮತ್ತು ಮಾನಸಿಕ ದೋಷಗಳನ್ನು ನಿವಾರಿಸುವುದು ಅಗತ್ಯ. ಕಿವುಡುತನಕ್ಕೆ ಶ್ರವಣಗ್ರಾಹಕ ಸಾಧನಗಳನ್ನೂ ದೃಷ್ಟಿದೋಷಗಳಿಗೆ ಕನ್ನಡಕಗಳನ್ನೂ ಒದಗಿಸಬೇಕು. ಒಳ್ಳೆಯ ಆಹಾರ, ವಿಶ್ರಾಂತಿ, ಚಿಕಿತ್ಸೆಗಳ ಮೂಲಕ ಅವನ ಆರೋಗ್ಯವನ್ನು ಉತ್ತಮಪಡಿಸಬೇಕು. ವಿದ್ಯಾರ್ಥಿಯಲ್ಲಿ ಆತ್ಮವಿಶ್ವಾಸ, ಸಹಬಾಳ್ವೆ, ಸಂವೇಗಗಳ ಸಾಮರಸ್ಯವನ್ನು ಬೆಳೆಸಬೇಕು. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಯನ್ನು ನಿವಾರಕ ಬೋಧನೆಗೆ ಸಿದ್ಧಗೊಳಿಸುವುವು.

 ನಿವಾರಕ ಬೋಧನಕ್ರಮ 
ನಿವಾರಣೆಯ ಯೋಜನೆಯ ಮೂರನೆ ಹಂತವಾಗಿ, ರಚನಾತ್ಮಕವೂ ಪರಿಣಾಮಕಾರಿಯೂ ಆದ ಬೋಧನಕ್ರಮದ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯ. ಈ ವ್ಯವಸ್ಥೆಯನ್ನು ರಚಿಸುವಾಗ ಎರಡು ಬಗೆಯ ವಿದ್ಯಾರ್ಥಿಗಳನ್ನು ಗಮನದಲ್ಲಿಡುವುದು ಒಳ್ಳೆಯದು.
 1 ಕೆಲವು ವಿದ್ಯಾರ್ಥಿಗಳ ಓದಿನ ಮಟ್ಟ ಅವರ ವಯಸ್ಸು ಅಥವಾ ತರಗತಿಗಳ ಮಟ್ಟಕ್ಕೆ ಕಡಿಮೆಯಾಗಿರುತ್ತದೆ. ಆದರೂ ಅವರ ಬುದ್ಧಿಶಕ್ತಿ, ಶಾರೀರಿಕ ಬೆಳೆವಣಿಗೆ, ವ್ಯಕ್ತಿತ್ವ, ಸಾಧಾರಣವಾಗಿರುತ್ತವೆ. ಇಂಥವರು ಸಾಮೂಹಿಕ ಕ್ರಮಗಳಿಗೆ ಹೊಂದಿಕೊಳ್ಳಬಲ್ಲರು.
2 ಇನ್ನು ಕೆಲವು ವಿದ್ಯಾರ್ಥಿಗಳ ಓದಿನ ಮಟ್ಟ ತೀವ್ರವಾಗಿ ಹಿಂದುಳಿದಿರುತ್ತದೆ. ಬುದ್ಧಿಶಕ್ತಿ ಮತ್ತು ವ್ಯಕ್ತಿತ್ವದಲ್ಲಿ ಅಸಾಧಾರಣ ದೋಷಗಳಿರುತ್ತವೆ. ಇವರಲ್ಲಿ ಅಂಗದೋಷಗಳೂ ಇರಬಹುದು. ಇಂಥವರು, ಸಾಮೂಹಿಕ ಕ್ರಮಗಳಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಇವರಿಗೆ ಪ್ರತ್ಯೇಕ ಚಿಕಿತ್ಸೆ ಅಗತ್ಯ.

ನಿವಾರಕ ಬೋಧನೆ ಶಾಲಾ ಕಾರ್ಯಕ್ರಮದ ಅತಿಮುಖ್ಯ ಅಂಗವಾಗಿರಬೇಕಲ್ಲದೆ, ಉಪಾಧ್ಯಾಯರ, ಪಠ್ಯಪುಸ್ತಕಗಳ, ಬೋಧನ ಕ್ರಮಗಳ ಮತ್ತು ಪರೀಕ್ಷಾವಿಧಾನಗಳ ಆಯ್ಕೆಯಲ್ಲಿ ಅನುಸರಿಸಬೇಕಾದ ತತ್ತ್ವಗಳಲ್ಲೂ ಸೂಕ್ತ, ಬದಲಾವಣೆ ಆವಶ್ಯಕ. ಮನೋವಿಜ್ಞಾನ ಶರೀರವಿಜ್ಞಾನಗಳಲ್ಲಿ ತರಬೇತು ಪಡೆದ ಉಪಾಧ್ಯಾಯರು, ವಿದ್ಯಾರ್ಥಿಗಳ ಅಭಿರುಚಿ ಮತ್ತು ಸಾಮಥರ್ಯ್‌ಗಳಿಗೆ ತಕ್ಕಂತೆ ರಚಿಸಿದ ಪುಸ್ತಕಗಳು ಮತ್ತು ವಿದ್ಯಾರ್ಥಿಯ ಪ್ರಗತಿಯನ್ನು ಅಳೆಯಬಲ್ಲ ಉತ್ತಮ ಪರೀಕ್ಷೆಗಳು ಅಗತ್ಯ.
ತರಗತಿಗಳಲ್ಲಿ ಇಲ್ಲಿ ಸೂಚಿಸಿದ ಕೆಲವು ಪ್ರಧಾನವಾದ ಅಂಶಗಳನ್ನು ಉಪನ್ಯಾಸ, ಸಂಘ, ಗೋಷ್ಠಿ ಮತ್ತು ವಿವಿಧ ವಿಷಯಗಳ ಅಭ್ಯಾಸ ಪಾಠ ಇವುಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಬಹುದು.
	ಉತ್ತಮ ಓದಿನ ಆವಶ್ಯಕತೆ
	ಉತ್ತಮ ಓದಿನ ಲಕ್ಷಣಗಳು
	ಉದ್ದೇಶಪುರ್ಣವಾದ ಓದು : ವಿವರಣಾತ್ಮಕ ಓದು, ಪರಿಚಯಾತ್ಮಕ ಓದು, ವಿಮರ್ಶಾತ್ಮಕ ಓದು
	ವಿಷಯಗ್ರಹಣ ಮತ್ತು ಏಕಾಗ್ರತೆ
	ಶಬ್ದಪರಿಚಯ ಮತ್ತು ಬೆಳೆವಣಿಗೆ
	ಓದಿನ ಅಭಿರುಚಿಗಳು ಮತ್ತು ಅಭ್ಯಾಸಗಳು
	ಸಹಾಯಕ ಪಠ್ಯ ವಸ್ತುಗಳು ಎಂದರೆ, ಶಬ್ದಕೋಶ, ವಿಶ್ವಕೋಶ, ಆಧಾರ ಪುಸ್ತಕಗಳು ಮುಂತಾದವುಗಳ ಬಳಕೆ
	ಆರೋಗ್ಯ ರಕ್ಷಣೆ ಮತ್ತು ಓದು
	ಮಾನವನ ಪರಸ್ಪರ ಅರಿವು ಮತ್ತು ಹೊಂದಾಣಿಕೆಯಲ್ಲಿ ಓದಿನ ಪಾತ್ರ.
 
ಕೆಲವು ಗಮನಾರ್ಹವಾದ ಎಚ್ಚರಿಕೆಗಳು: 1 ನಿವಾರಕ ಬೋಧನ ವ್ಯವಸ್ಥೆ ವಿದ್ಯಾರ್ಥಿಯ ಮನೋರಂಜನೆ ಅಥವಾ ವಿರಾಮ ಕಾಲಕ್ಕೆ ಬದಲಾಗಿ ಇರಬಾರದು. 2 ಇವು ವಿದ್ಯಾರ್ಥಿಗಳ ದೋಷಗಳನ್ನೂ ನ್ಯೂನತೆಗಳನ್ನೂ ಎತ್ತಿಹಿಡಿಯುವ ಅಥವಾ ಅವುಗಳಿಗಾಗಿ ವಿಧಿಸುವ ದಂಡನೆಯ ಕ್ರಮವಾಗಿರಬಾರದು. 3. ತರಗತಿಗಳಿಗಾಗಿ ವಿನಿಯೋಗಿಸಲ್ಪಡುವ ಸಮಯ ಸಾಕಷ್ಟಿದ್ದು ಉತ್ತಮ ವಾತಾವರಣದಲ್ಲಿ ನಡೆಯಬೇಕು. 4. ಈ ಕಾರ್ಯಕ್ಕಾಗಿ ನಿಯಮಿಸಲ್ಪಟ್ಟ ಉಪಾಧ್ಯಾಯರು ಉತ್ತಮ ತರಬೇತು ಹೊಂದಿದವರೂ ಉತ್ಸಾಹಿಗಳು ಸಂದರ್ಭಗಳಿಗೆ ಬಹು ಸುಲಭವಾಗಿ ಹೊಂದಿಕೊಳ್ಳಬಲ್ಲ ಜಾಣ್ಮೆಯುಳ್ಳವರೂ ಆಗಿರಬೇಕು. 5. ಕಾರ್ಯಕ್ರಮಗಳು ಅತಿ ನಿಷ್ಠೆಯವಾಗಿರದೆ ಉಪಯುಕ್ತ ಬದಲಾವಣೆಗಳಿಗೆ ಅವಕಾಶವಿರಬೇಕು. ಕೆಲವು ಮಾರ್ಗಗಳು ವ್ಯರ್ಥವೆಂದು ತೋರಿಬಂದಲ್ಲಿ ಕೂಡಲೆ ಅವುಗಳನ್ನು ಬದಲಾಯಿಸಬೇಕು. 6 ವಿದ್ಯಾರ್ಥಿಯಲ್ಲಿ ಶ್ರದ್ಧೆ ಮೂಡಿಸಬಲ್ಲ ಹಾಗೂ ಓದಿನ ಅಭಿರುಚಿಗಳನ್ನು ಉಳಿಸಿ ಬೆಳೆಸಬಲ್ಲ ನಾನಾರೀತಿಯ ಅಭ್ಯಾಸ ಪಾಠಗಳಿರಬೇಕು. 7 ವ್ಯಾಸಂಗಕ್ಕೆ ಸಂಬಂಧಪಟ್ಟ ವಿಧಾನಗಳು ವಿದ್ಯಾರ್ಥಿಯಲ್ಲಿ ಸಾಕಷ್ಟು ಮೂಡುವವರೆಗೂ ನಿವಾರಕ ಕ್ರಮಗಳನ್ನು ಮುಂದುವರಿಸಬೇಕು.

4. ಪ್ರತಿಬಂಧಕ ಕಾರ್ಯ: ಓದಿನ ದೋಷಗಳನ್ನು ನಿವಾರಿಸಬಲ್ಲ ಪರಿಹಾರ ಕಾರ್ಯಗಳ ಜೊತೆಗೆ, ಅವುಗಳನ್ನು ತಡೆಗಟ್ಟಬಲ್ಲ ಪ್ರತಿಬಂಧಕ ಕಾರ್ಯಗಳೂ ಅಗತ್ಯ. ದೋಷಗಳ ಸೋಂಕು ಉತ್ತಮ ವಿದ್ಯಾರ್ಥಿಗಳಿಗೂ ಅಂಟದಂತೆ ಎಚ್ಚರಿಕೆ ವಹಿಸುವುದು ಅವಶ್ಯಕ. ಆದ್ದರಿಂದ ಶಾಲೆಯ ವಿವಿಧ ತರಗತಿಗಳಲ್ಲಿ ಓದನ್ನು ವಿಶೇಷ ವಿಷಯವನ್ನಾಗಿಟ್ಟುಕೊಳ್ಳಬೇಕು. ಮತ್ತು ಅದಕ್ಕೆ ತಕ್ಕಂತೆ ಅನುಭವಗಳನ್ನೂ ವಸ್ತುಗಳನ್ನೂ ಸಮಯವನ್ನೂ ಕಲ್ಪಿಸಬೇಕು. ಬೋಧನೆಯ ವ್ಯವಸ್ಥೆಯ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳೂ ಪಡೆಯಬೇಕು.

ಓದುಗಾರಿಕೆಯನ್ನು ಪರಿಣಾಮಕಾರಿ ಉಪಕರಣವಾಗುವಂತೆ, ಪ್ರೌಢಕಲೆಯಾಗುವಂತೆ ಬೋಧಿಸುವುದು ಒಂದು ಶಾಲೆಯಲ್ಲೆ ಸಾಧ್ಯವಾಗುವ ಕಾರ್ಯವಲ್ಲ. ಅದು ಹಂತಹಂತವಾಗಿ ಸಾಗಬೇಕು. ಅಂಥ ಬೇರೆ ಬೇರೆ ಹಂತಗಳನ್ನೂ ಅಲ್ಲಿ ಸಾಧನೆಯಾಗಬೇಕಾದ ಓದುಗಾರಿಕೆಯ ಅಂಶಗಳನ್ನೂ ಇಲ್ಲಿ ಸೂಚಿಸಬಹುದು;

1 ಶಿಶುವಿಹಾರ, ಕಿಂಡರ್ಗಾರ್ಟನ್ ತರಗತಿಗಳಲ್ಲಿ ಓದು ಕಲಿಯಲು ಮಕ್ಕಳನ್ನು ಪ್ರೇರಿಸುವ ಅನುಭವಗಳನ್ನೂ ಶಿಕ್ಷಣವನ್ನೂ ಒದಗಿಸುವುದು. 
2 ಪ್ರಾಥಮಿಕ ಶಾಲೆಯ ಮೊದಲನೆಯ ಮತ್ತು ಎರಡನೆಯ ತರಗತಿಗಳಲ್ಲಿ : ಈ ಮಟ್ಟದ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಸುಲಭ ಪಾಠಗಳನ್ನು ಸ್ವತಂತ್ರವಾಗಿ ಓದುವ ಸಾಮಥರ್ಯ್‌ದ ಬೆಳೆವಣಿಗೆ ಮತ್ತು ವಿಚಾರವಿನಿಮಯಕ್ಕೆ ಓದು ಒಂದು ಪ್ರಬಲ ಸಾಧನವೆಂದು ತೋರಿಸಿಕೊಡುವುದು. 3 ಪ್ರಾಥಮಿಕ ಶಾಲೆಯ 3,4,5ನೆಯ ತರಗತಿಗಳಲ್ಲಿ ಓದಿಗೆ ಸಂಬಂಧಪಟ್ಟ ಮೂಲ ಅಭ್ಯಾಸಗಳನ್ನೂ ವಿಧಾನಗಳನ್ನೂ ಮನೋಭಾವಗಳನ್ನೂ ಬೆಳೆಸುವುದು. ಇವುಗಳ ಆಧಾರದ ಮೇಲೆ, ಓದಿದ ವಿಷಯಗಳ ಅರ್ಥವಿವರಣೆ ಮಾಡುವುದು. ಸ್ಪಷ್ಟವಾಗಿ ಹಾಗೂ ತಪ್ಪಿಲ್ಲದೆ ಓದುವುದು. ಗಟ್ಟಿಯಾಗಿಯೂ ಮತ್ತು ಮೌನವಾಗಿಯೂ ಚೆನ್ನಾಗಿ ಓದುವುದು-ಇವೆಲ್ಲ ಬೆಳೆಯುತ್ತವೆ. ಪ್ರಾಥಮಿಕ ಶಾಲೆಯ 6 ಮತ್ತು 7ನೆಯ ತರಗತಿಗಳಲ್ಲಿ ವಿದ್ಯಾರ್ಥಿಯ ಅನುಭವ ವಿಶೇಷಗಳನ್ನು ವಿಸ್ತರಿಸುವುದು, ಅವನ ಅಭಿರುಚಿಗಳಲ್ಲಿ ವಿವೇಚನೆಯನ್ನು ಮೂಡಿಸುವುದು 5 ಪ್ರೌಢಶಾಲೆಯ 8,9ನೆಯ ಹಂತಗಳಲ್ಲಿ ಬೆಳೆಸಿ ಅಭ್ಯಾಸ ಮತ್ತು ಅಭಿರುಚಿಗಳಲ್ಲಿ ನಯ ಮತ್ತು ಕುಶಲತೆಗಳನ್ನು ತುಂಬುವುದು. 6 ಪ್ರೌಢಶಾಲೆಯ 10 ಮತ್ತು 11ನೆಯ ಹಂತಗಳಲ್ಲಿ ಶ್ರೇಷ್ಠ ಸಾಹಿತ್ಯದಲ್ಲಿ ಅಭಿರುಚಿ ಮತ್ತು ವಿಚಾರಸಂಪತ್ತನ್ನು ಬೆಳೆಸುವುದರಲ್ಲಿ ಆಸಕ್ತಿ ಮೂಡುವಂತೆ ಮಾಡುವುದು. ಪತ್ರಿಕೆಗಳ, ಲೇಖನಗಳ, ಕಥೆಕಾದಂಬರಿಗಳ ಆಯ್ಕೆಯಲ್ಲಿ ವಿವೇಚನೆಯನ್ನು ಬೆಳೆಸುವುದು. ಮಾನವ ಇಂದಿನ ವೈಜ್ಞಾನಿಕ ಹಾಗೂ ತಾಂತ್ರಿಕ ಯುಗದಲ್ಲಿ ಸಾರ್ಥಕ್ಯವನ್ನು ಸಾಧಿಸಬೇಕಾದರೆ ಓದು ಒಂದು ಅನಿವಾರ್ಯ ಸಾಧನ. ಇದರ ಬೆಳೆವಣಿಗೆಯಲ್ಲಿ ಶಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಮಾರ್ಗದಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ವ್ಯವಸ್ಥೆ ಉತ್ತಮವಾಗಿರಬೇಕು. ವಿದ್ಯಾರ್ಥಿಯ ಓದಿನಲ್ಲಿ ಹೆಚ್ಚಿನ ದಕ್ಷತೆ ಮತ್ತು ಕುಶಲತೆಗಳನ್ನು ಬೆಳೆಸುವುದರ ಜೊತೆಗೆ, ಶಾಶ್ವತವಾದ ಅಭಿರುಚಿಗಳನ್ನು ಮೂಡಿಸುವುದು ಎಲ್ಲ ಬೋಧನ ಕ್ರಮಗಳ ಮುಖ್ಯ ಧೋರಣೆಯಾಗಿರಬೇಕು.

 ಓದುಗಾರಿಕೆಯ ಪ್ರಕಾರಗಳು 
ಓದುವ ಉದ್ದೇಶದ ಆಧಾರದ ಮೇಲೆ ಓದುಗಾರಿಕೆಯನ್ನು ಹಲವು ಬಗೆಗಳನ್ನಾಗಿ ಗುರುತಿಸಬಹುದು. ಕೇವಲ ಮನೋರಂಜನೆಯೇ ಪ್ರಧಾನ ಉದ್ದೇಶವಾಗಿರುವ ಓದುಗಾರಿಕೆಯನ್ನು ಮನೋರಂಜಕ ಓದುಗಾರಿಕೆಯೆಂದು ಕರೆಯುವರು. ಕಥೆ, ಕಾದಂಬರಿ, ನಿಸರ್ಗಚಿತ್ರ, ನಾಟಕ ಇತ್ಯಾದಿ ಸಾಹಿತ್ಯ ಕೃತಿಗಳ ವಾಚನ ಈ ಬಗೆಗೆ ಸೇರುತ್ತವೆ. ಸುದ್ದಿಗಳನ್ನು ತಿಳಿಯುವುದೇ ಮುಖ್ಯ ಉದ್ದೇಶದಿಂದ ಓದುವುದು ಸಮಾಚಾರ ಸಂಗ್ರಹ ವಾಚನ; ವೃತ್ತಪತ್ರಿಕೆ, ಜಾಹೀರಾತು, ತಿಳಿವಳಿಕೆ ಪತ್ರ ಇವುಗಳ ವಾಚನ ಈ ಬಗೆಗೆ ಸೇರಿದ್ದು, ವಿಜ್ಞಾನ, ತಂತ್ರಶಾಸ್ತ್ರ, ಮಾನವಿಕ ವಿಷಯ ಇತ್ಯಾದಿಗಳಿಗೆ ಸಂಬಂಧಿಸಿದ ಜ್ಞಾನವನ್ನು ತಿಳಿದುಕೊಳ್ಳುವುದಕ್ಕಾಗಿ ಕೈಗೊಳ್ಳುವ ಓದುಗಾರಿಕೆಗೆ ಜ್ಞಾನಾರ್ಜನೆಯ ಓದುಗಾರಿಕೆ ಎನ್ನಬಹುದು. ಮನೋರೋಗದಿಂದ ನರಳುವ ಕೆಲವು ರೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಬರೆದು ಮುದ್ರಿಸಿದ ವಾಚನ ವಸ್ತುಗಳನ್ನು ಕೊಟ್ಟು ಓದಿಸಿ, ಆ ಮೂಲಕ ಅವರ ರೋಗ ನಿವಾರಣೆಗೆ ಯತ್ನಿಸುವರು. ಇದು ಚಿಕಿತ್ಸಾರೂಪದ ವಾಚನ.

ಓದುಗಾರಿಕೆ ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಪರಿಣಾಮ ಬೀರಬಲ್ಲ ಅಭ್ಯಾಸ. ವಾಚನವಸ್ತುವಿನ ಸ್ವರೂಪವನ್ನನುಸರಿಸಿ ಆ ಪರಿಣಾಮ ಕೆಟ್ಟದ್ದಾಗಿರಬಹುದು; ಒಳ್ಳೆಯದೂ ಆಗಿರಬಹುದು. ಹಾಸ್ಯ, ಆಶ್ಚರ್ಯ ಈ ಮನೋಗುಣಗಳನ್ನು ಪ್ರಚೋದಿಸಲು ವಿಕಾರವೂ ವಿಚಿತ್ರವೂ ಅಪರಾಧ ಪುರ್ಣವೂ ಆದ ವರ್ಣನೆಗಳನ್ನೊಳಗೊಂಡ ವಾಚನ ವಸ್ತು ಓದುಗರಲ್ಲಿ ಕ್ಷುಲ್ಲಕ ಭಾವನೆಗಳನ್ನೂ ಅಪರಾಧದ ಕಾರ್ಯಗಳನ್ನು ಮಾಡುವ ಚಾಳಿಯನ್ನೂ ಬೆಳೆಸಬಹುದು. ಗಹನವೂ ಗಂಭೀರವೂ ರಮಣೀಯವೂ ಆದ ಕೃತಿಗಳು ವ್ಯಕ್ತಿಯಲ್ಲಿ ವಿಷಯಜ್ಞಾನ, ಅಭಿಪ್ರಾಯ ನಿಷ್ಕೃಷ್ಟತೆ, ಧರ್ಮ ಮತ್ತು ತತ್ತ್ವನಿಷ್ಠೆ, ನ್ಯಾಯಪರತೆ, ಕಾರ್ಯತತ್ಪರತೆ, ಮಾನವೀಯ ಮನೋಧರ್ಮ ಇತ್ಯಾದಿ ಲಕ್ಷಣಗಳನ್ನು ಪೋಷಿಸಬಲ್ಲವು.       (ಎ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ